ಎರ್ನಾಕುಲಂ: ಇಬ್ಬರು ಸಲಿಂಗಿಗಳು ( ಲೈಂಗಿಕವಾಗಿ ಆಕರ್ಷಿತರಾದ ಇಬ್ಬರು ಮಹಿಳೆಯರು ) ಒಟ್ಟಿಗೆ ವಾಸಿಸಲು ಕೇರಳ ಹೈಕೋರ್ಟ್ ಅನುಮತಿ ನೀಡಿದೆ. ಎರ್ನಾಕುಲಂನ ಆಲುವಾ ಮೂಲದ ಆದಿಲಾ ನಸ್ರಿನ್ ಅವರ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್, ತನ್ನ ಕುಟುಂಬದಿಂದ ಬಲವಂತವಾಗಿ ಬಂಧಿಸಲ್ಪಟ್ಟಿರುವ ಫಾತಿಮಾ ನೂರಾಗೆ ಆದಿಲಾ ನಸ್ರಿನ್ ಜೊತೆ ಹೋಗಿ ವಾಸಿಸಲು ಅನುಮತಿ ನೀಡಿದೆ.
ಆದಿಲಾ ನಸ್ರಿನ್ ಮತ್ತು ಫಾತಿಮಾ ನೂರಾ ಸೌದಿ ಅರೇಬಿಯಾದ ಶಾಲೆಯಲ್ಲಿ ಒಟ್ಟಿಗೆ ಓದುತ್ತಿದ್ದಾಗ ಪ್ರೀತಿಸುತ್ತಿದ್ದರು. ಇವರಿಬ್ಬರ ಸಂಬಂಧದ ವಿಚಾರ ತಿಳಿದ ಕುಟುಂಬಸ್ಥರು ಈ ಸಂಬಂಧ ವಿರೋಧಿಸಿದ್ದರು. ಆದರೆ, ಕೇರಳಕ್ಕೆ ಮರಳಿದ ಬಳಿಕವೂ ತಮ್ಮ ಸಂಬಂಧವನ್ನು ಮುಂದುವರಿಸಿದ್ದರು.
ಇವರಿಗೆ ಕೆಲಸ ಸಿಕ್ಕಿದಾಗ ಒಟ್ಟಿಗೆ ವಾಸಿಸಲು ನಿರ್ಧರಿಸಿದ್ದಾರೆ. ಅದರಂತೆ ಆದಿಲಾ ಮೇ 19 ರಂದು ಕೊಯಿಕ್ಕೋಡ್‌ನಲ್ಲಿ ನೂರಾಳನ್ನು ಭೇಟಿಯಾಗಿ ನಂತರ ಮಹಿಳಾ ರಕ್ಷಣಾ ಕೇಂದ್ರದಲ್ಲಿ ದಾಖಲಾಗಿದ್ದರು. ಇಬ್ಬರನ್ನೂ ಹುಡುಕಿಕೊಂಡು ಕುಟುಂಬಸ್ಥರು ಕೇಂದ್ರಕ್ಕೆ ಬಂದಾಗ ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು.
ಇದಾದ ನಂತರ ಆದಿಲಾಳ ಪೋಷಕರು ಇಬ್ಬರನ್ನೂ ಆಲುವಾದಲ್ಲಿರುವ ಅವರ ನಿವಾಸಕ್ಕೆ ಕರೆದೊಯ್ದಿದ್ದರು. ಆದರೆ, ತಾಮರಸ್ಸೆರಿಯ ನೂರಾ ಸಂಬಂಧಿಕರು ಅಲುವಾಕ್ಕೆ ಬಂದು ನೂರಾಳನ್ನು ಅಪಹರಿಸಿಕೊಂಡು ಹೋಗಿದ್ದರು.
ಆದಿಲಾ ಮೇ 30 ರಂದು ಕೇರಳ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿ, ಒಟ್ಟಿಗೆ ವಾಸಿಸಲು ಅವಕಾಶ ನೀಡುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಹೈಕೋರ್ಟ್ ಮೇ 31 ರಂದು ಅರ್ಜಿಯನ್ನು ವಿಚಾರಣೆ ನಡೆಸಿ ಈ ಜೋಡಿ ಒಟ್ಟಿಗೆ ವಾಸಿಸಲು ಅನುಮತಿ ನೀಡಿದೆ.
ಇದನ್ನೂ ಓದಿ: ಪ್ರಧಾನಿ ವಿಡಿಯೋ ಕಾನ್ಫರೆನ್ಸ್ನಲ್ಲಿ ಕಲಬುರಗಿಯ ಸಂತೋಷಿಗೆ ಅವಕಾಶ : ಚುನಾವಣೆಗೆ ನಿಲ್ಲಿಸುವ ಬಗ್ಗೆ ಮೋದಿ ಮಾತು!