ಮುಂಬೈ : ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರು ತಮ್ಮ ಮಾಜಿ ಸಂಗಾತಿ ರಿಯಾ ಪಿಳ್ಳೈ ಅವರ ಮೇಲೆ ಹಲವಾರು ಕೌಟುಂಬಿಕ ದೌರ್ಜನ್ಯವನ್ನು ಎಸಗಿದ್ದಾರೆ ಎಂದು ಮುಂಬೈ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ತೀರ್ಪು ನೀಡಿದ್ದು, ರಿಯಾ ಪಿಳ್ಳೈಗೆ ಪರಿಹಾರ ನೀಡಬೇಕೆಂದು ಆದೇಶಿಸಿದೆ.
ರಿಯಾ ಪಿಳ್ಳೈ ಅವರು ನಟಿ ಮತ್ತು ರೂಪದರ್ಶಿಯೂ ಆಗಿದ್ದು, ಒಂದು ವೇಳೆ ಅವರು ಲಿಯಾಂಡರ್ ಪೇಸ್ ಅವರೊಂದಿಗೆ ಇರುವ ಮನೆಯನ್ನು ಅಧಿಕೃತವಾಗಿ ತೊರೆಯಲು ಮುಂದಾದರೆ, ಅವರಿಗೆ ತಮ್ಮ ಜೀವನ ನಿರ್ವಹಣೆಗಾಗಿ ತಿಂಗಳಿಗೆ 1 ಲಕ್ಷ ರೂಪಾಯಿಯ ಜೊತೆಗೆ ಹೆಚ್ಚುವರಿಯಾಗಿ ಮನೆ ಬಾಡಿಗೆಗೆ 50 ಸಾವಿರ ರೂ. ನೀಡಬೇಕೆಂದು ಆದೇಶ ನೀಡಿದೆ.
2014ರಲ್ಲಿ 'ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ' ಅಡಿಯಲ್ಲಿ ಪರಿಹಾರ ಮತ್ತು ರಕ್ಷಣೆ ಕೋರಿ ರಿಯಾ ಪಿಳ್ಳೈ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಸುಮಾರು ಎಂಟು ವರ್ಷಗಳ ಕಾಲ ಪೇಸ್ ಅವರೊಂದಿಗೆ ಲಿವ್-ಇನ್-ರಿಲೇಶನ್ಶಿಪ್ನಲ್ಲಿ ಇರುವುದಾಗಿ ರಿಯಾ ಹೇಳಿಕೊಂಡಿದ್ದರು. ಅಲ್ಲದೇ, ಲಿಯಾಂಡರ್ ಪೇಸ್ ವಿರುದ್ಧ ಕಿರುಕುಳದ ಆರೋಪ ಹೊರೆಸಿದ್ದರು.
ಲಿಯಾಂಡರ್ ಪೇಸ್ ಕೆಲವೊಂದು ಕೃತ್ಯಗಳ ಮೂಲಕ ಮತ್ತು ನಡವಳಿಕೆ ಮೂಲಕ ನನಗೆ ನಿಂದನೆ ಮಾಡಿದ್ದಾರೆ. ಅವರ ನಿಂದನೆಯಿಂದಾಗಿ ನನಗೆ ಭಾವನಾತ್ಮಕ ಹಿಂಸೆ ಉಂಟಾಗಿದೆ. ಅವರ ನಡೆಯಿಂದ ಆಘಾತಗೊಂಡಿದ್ದೇನೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ: ಯುದ್ಧಪೀಡಿತ ಉಕ್ರೇನ್ಗೆ ಕ್ರಿಪ್ಟೋ ಮೂಲಕ ನೆರವು: ಎನ್ಜಿಒದಿಂದ 4 ಲಕ್ಷ ಡಾಲರ್ ಸಂಗ್ರಹ
ಈ ದೂರಿನ ವಿಚಾರಣೆ ಪೂರ್ಣಗೊಂಡಿದ್ದು, ಮುಂಬೈ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ 'ರಿಯಾ ಪಿಳ್ಳೈ ಅವರ ಮೇಲೆ ಹಲವಾರು ಕೌಟುಂಬಿಕ ದೌರ್ಜನ್ಯವನ್ನು ಲಿಯಾಂಡರ್ ಪೇಸ್ ಎದುರಿಸಿರುವುದು ಸಾಬೀತಾಗಿದೆ ಎಂದು ತೀರ್ಪು ನೀಡಿದ್ದಾರೆ.