ಅಹಮದಾಬಾದ್ (ಗುಜರಾತ್): ಗುಜರಾತ್ನ ಬೋಟಾಡ್ ಜಿಲ್ಲೆಯಲ್ಲಿ ನಡೆದ ಕಳ್ಳಭಟ್ಟಿ ದುರಂತದಲ್ಲಿ ಮೃತರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಇತ್ತ, ಮೃತರನ್ನು ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ.
ಬರ್ವಾಲಾ ತಾಲೂಕಿನ ರೋಜಿದ್ ಹಾಗೂ ಧಂಧೂಕಾಮ, ಭಾವನಗರ ಸೇರಿ ಸುತ್ತಮತ್ತಲಿನ ಗ್ರಾಮಗಳಲ್ಲಿ ಕಳ್ಳಭಟ್ಟಿ ಸೇವಿಸಿ ಒಟ್ಟಾರೆ 47 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. 47 ಜನರ ಪೈಕಿ 30 ಜನರು ಸಾವನ್ನಪ್ಪಿದ್ದಾರೆ. ಇಂದು ರೋಜಿದ್ ಗ್ರಾಮದಲ್ಲಿ ಐವರ ಪಾರ್ಥಿವ ಶರೀರಗಳನ್ನು ಟ್ಯ್ರಾಕ್ಟರ್ಗಳಲ್ಲಿ ಒಟ್ಟಿಗೆ ಅಂತಿಮ ಯಾತ್ರೆ ನಡೆಸಲಾಗಿದೆ. ಈ ಸರಣಿ ಸಾವುಗಳಿಂದ ಗ್ರಾಮದಾದ್ಯಂತ ಶೋಕ ಮಡುಗಟ್ಟಿದೆ.
ಈ ಕಳ್ಳಭಟ್ಟಿ ದುರಂತದ ನಂತರ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಈ ಬಗ್ಗೆ ತನಿಖೆಗಾಗಿ ಐಜಿಪಿ ನೇತೃತ್ವದ ಸಮಿತಿಯನ್ನು ರಚನೆ ಮಾಡಲಾಗಿದೆ. ಅಲ್ಲದೇ, ಇಂದು ಗೃಹ ಸಚಿವ ಹರ್ಷ ಸಾಂಘ್ವಿ ಅಧ್ಯಕ್ಷತೆಯಲ್ಲಿ ಬೋಟಾಡ್‌ನಲ್ಲಿ ಉನ್ನತ ಸಮಿತಿಯ ಸಭೆ ನಡೆಸಲಾಗಿದೆ.
ಈ ಸಭೆಯ ನಂತರ ರಾಜ್ಯ ಪೊಲೀಸ್ ಮುಖ್ಯಸ್ಥ ಆಶಿಶ್ ಭಾಟಿಯಾ ಮಾತನಾಡಿ, ಇಡೀ ಘಟನೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಕ್ರಮಗಳನ್ನು ಮುಂದಿನ 24 ಗಂಟೆಯೊಳಗೆ ಪೂರ್ಣಗೊಳಿಸಲಾಗುವುದು. ಅಲ್ಲದೇ, ಈಗಾಗಲೇ 13 ಜನ ಆರೋಪಿಗಳ ವಿರುದ್ಧ ಕೇಸ್ ದಾಖಲಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿರೋಧದ ನಡುವೆಯೂ ಮದುವೆಯಾದ ಜೋಡಿ: ಅಮಾನುಷವಾಗಿ ಕೊಲೆ ಮಾಡಿದ ತಂದೆ