ಪಾಟ್ನಾ (ಬಿಹಾರ): 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳು ಇಂದು ಬಿಹಾರ ರಾಜಧಾನಿ ಪಾಟ್ನಾದಲ್ಲಿ ಮಹತ್ವದ ಸಭೆ ಸೇರಿದವು. ಮುಂದಿನ ದಿನಗಳಲ್ಲಿ ಈ ಸಭೆಯು ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸಲಿದೆ ಎಂದು ಆ ಪಕ್ಷಗಳ ನಾಯಕರು ನಂಬಿದ್ದಾರೆ. ಇದರ ನಡುವೆ ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಇಡೀ ನಾಯಕರನ್ನು ನಗೆಗಡಲಲ್ಲಿ ತೇಲಿಸಿಬಿಟ್ಟರು.
ಇದನ್ನೂ ಓದಿ: ಭಾರತದ ಅಡಿಪಾಯದ ಮೇಲೆ ದಾಳಿ: ರಾಹುಲ್ ಗಾಂಧಿ ಆರೋಪ
ಮುಖ್ಯಮಂತ್ರಿ ನಿತೀಶ್ ಕುಮಾರ್ ನಿವಾಸದಲ್ಲಿ ಮಧ್ಯಾಹ್ನ ನಡೆದ ಸಭೆಯ ನಂತರ ಪ್ರತಿಪಕ್ಷ ನಾಯಕರು ಸಾಲಾಗಿ ಕುಳಿತು ಸುದ್ದಿಗೋಷ್ಠಿ ನಡೆಸಿದರು. ಲಾಲು ಪ್ರಸಾದ್ ತಮ್ಮದೇ ಶೈಲಿಯಲ್ಲಿ ಮಾತನಾಡಿದರು. ಬಿಜೆಪಿ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಧೈರ್ಯ, ಸಾಹಸವನ್ನು ಲಾಲು ಹೊಗಳಿದರು. ಇದೇ ವೇಳೆ, ರಾಹುಲ್‌ಗೆ ಬೇಗ ಮದುವೆಯಾಗುವಂತೆಯೂ ಅವರು ಸಲಹೆ ನೀಡಿ ಇಡೀ ಸುದ್ದಿಗೋಷ್ಠಿಯನ್ನು ನಗೆಗಡಲ್ಲಿ ತೇಲಿಸಿದರು.
''ಇಲ್ಲಿ ರಾಹುಲ್ ಗಾಂಧಿ ಬಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಭಾರತದಾದ್ಯಂತ ಪಾದಯಾತ್ರೆ ಮೂಲಕ ಸಂಚರಿಸಿದ್ದಾರೆ. ಅದಾನಿ ವಿಚಾರದಲ್ಲಿ ಲೋಕಸಭೆಯಲ್ಲಿ ಉತ್ತಮ ಹೋರಾಟ ನಡೆಸಿದ್ದಾರೆ'' ಎಂದು ಲಾಲು ಹೇಳಿದರು. ಈ ವೇಳೆ, ಪಕ್ಕದಲ್ಲಿ ಕುಳಿತಿದ್ದ ನಿತೀಶ್ ಮಧ್ಯಪ್ರವೇಶಿಸಿ ರಾಹುಲ್ ಗಡ್ಡ ಬೆಳೆಸಿಕೊಂಡಿದ್ದಾರೆ ಎಂದರು. ತಮ್ಮ ಮಾತು ಮುಂದುವರೆಸಿದ ಲಾಲು, ಜಾಸ್ತಿ ಉದ್ಧ ಗಡ್ಡ ಬೆಳೆಸಬೇಡಿ. ನೀವು ಮದುವೆ ಆಗಬೇಕಿತ್ತು. ನಮ್ಮ ಮಾತು ಕೇಳಿಲ್ಲ. ಈಗಲೂ ಸಮಯ ಮೀರಿಲ್ಲ ಎಂದು ಲಾಲು ಹೇಳಿದರು.
ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಒಟ್ಟಿಗೆ ಹೋರಾಡಲು ಪ್ರತಿಪಕ್ಷ ನಾಯಕರ ನಿರ್ಧಾರ, ಮುಂದಿನ ಸಭೆ ಶಿಮ್ಲಾದಲ್ಲಿ
ಅಲ್ಲದೇ, ನೀವು ಮದುವೆ ಮಾಡಿಕೊಳ್ಳಿ. ನಮ್ಮ ಮಾತು ಕೇಳಿ. ನಾವು ಮೆರವಣಿಗೆಯಲ್ಲಿ ಬರುತ್ತೇವೆ ಎಂದು ಲಾಲು ಹೇಳುತ್ತಿದ್ದಂತೆ ರಾಹುಲ್ 'ಸರಿ ಆಗುತ್ತೆ' ಎನ್ನುತ್ತಾರೆ. ಆಗ ಮತ್ತೆ ಲಾಲು, ನಿಮ್ಮ ತಾಯಿ ತಮ್ಮ ಮಾತು ಕೇಳುತ್ತಿಲ್ಲ. ನೀವು ಮದುವೆ ಮಾಡಿಸಿ ಎಂದು ನಮಗೆ ಹೇಳುತ್ತಿದ್ದರು ಎಂದು ತಿಳಿಸುತ್ತಾರೆ. ಲಾಲು ಸಲಹೆಗೆ ನಗುತ್ತಲೇ ಪ್ರತಿಕ್ರಿಯಿಸಿದ ರಾಹುಲ್, 'ನೀವು ಕೇಳಿದ್ದರಿಂದ ಮದುವೆ ಆಗುತ್ತದೆ' ಎಂದು ಪುನರುಚ್ಚರಿಸುತ್ತಾರೆ. ಇದೇ ವೇಳೆ, ಸುದ್ದಿಗೋಷ್ಠಿಯಲ್ಲಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ಹಿಡಿದು ಎಲ್ಲ ನಾಯಕರು ಮುಸಿನಕ್ಕರು.
ಇಂದು ನಡೆದ ಪ್ರತಿಪಕ್ಷಗಳ ಸಭೆಯಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ, ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ, ಸಂಸದ ಸಂಜಯ್ ರಾವತ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿ ಹಲವರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಪಾಟ್ನಾದಲ್ಲಿ ವಿಪಕ್ಷ ನಾಯಕರ ಮೆಗಾ ಸಭೆ: ಲೋಕಸಭೆ ಚುನಾವಣೆಗೆ ರೂಪುರೇಷೆ ಚರ್ಚೆ- ಯಾರೆಲ್ಲಾ ಭಾಗಿ?