ಡೆಹ್ರಾಡೂನ್ (ಉತ್ತರಾಖಂಡ): ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕ್ರಿಕೆಟಿಗ ರಿಷಭ್ ಪಂತ್ ಅವರಿಗೆ ಉತ್ತರಾಖಂಡದ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದಾರೆ. ಇದರ ನಡುವೆ ರಿಷಭ್ ಪಂತ್ ಆರೋಗ್ಯ ಸುಧಾರಿಸುತ್ತಿದೆ. ಈಗ ಮೊದಲಿಗಿಂತಲೂ ಅವರು ಸ್ವಲ್ಪ ಚೇತರಿಸಿಕೊಂಡಿದ್ದಾರೆ ಎಂಬ ಗುಡ್ ನ್ಯೂಸ್ ಬಂದಿದೆ.
ಶುಕ್ರವಾರ ಬೆಳಗ್ಗೆ ಉತ್ತರಾಖಂಡನ ರೂರ್ಕಿ ಗಡಿ ಬಳಿ ದೆಹಲಿ ಮತ್ತು ಡೆಹ್ರಾಡೂನ್ ಹೆದ್ದಾರಿಯಲ್ಲಿ ನಡೆದ ಕಾರು ಅಪಘಾತದಲ್ಲಿ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರು ಡೆಹ್ರಾಡೂನ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವು ಪ್ರಮುಖರು ಸಹ ಆಸ್ಪತ್ರೆಗೆ ತೆರಳಿ ಪಂತ್ ಅವರ ಆರೋಗ್ಯ ವಿಚಾರಿಸುತ್ತಿದ್ದಾರೆ.
ಶನಿವಾರ ಬೆಳಗ್ಗೆ ಬಾಲಿವುಡ್ ಹಿರಿಯ ನಟರಾದ ಅನಿಲ್ ಕಪೂರ್ ಮತ್ತು ಅನುಪಮ್ ಖೇರ್ ಸಹ ಆಸ್ಪತ್ರೆಗೆ ಭೇಟಿ ಕೊಟ್ಟು ಯುವ ಕ್ರಿಕೆಟಿಗನ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇದೀಗ ಖಾನ್ಪುರ್ ಶಾಸಕ ಉಮೇಶ್ ಕುಮಾರ್ ಕೂಡ ಪಂತ್ ಚಿಕಿತ್ಸೆ ಕುರಿತು ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ರಿಷಬ್ ಪಂತ್ ಅವರ ತಾಯಿ, ಸಹೋದರಿ ಸಾಕ್ಷಿ, ಕ್ರಿಕೆಟಿಗ ನಿತೀಶ್ ರಾಣಾ ಮತ್ತು ಕುಟುಂಬ ಸದಸ್ಯರನ್ನು ಶಾಸಕರು ಭೇಟಿ ಮಾಡಿದ್ದಾರೆ.
ಇದನ್ನೂ ಓದಿ: ಅಪಘಾತಕ್ಕೀಡಾದ ಕ್ರಿಕೆಟಿಗ ರಿಷಭ್ ಪಂತ್ ರಕ್ಷಿಸಿದ ಚಾಲಕ ಸುಶೀಲ್: ಆಪತ್ಬಾಂಧವ ಹೇಳಿದ ಕರಾಳಕಥೆ
ಆಸ್ಪತ್ರೆಗೆ ಭೇಟಿ ಶಾಸಕರು ಹೇಳಿದ್ದೇನು?: ಆಸ್ಪತ್ರೆಗೆ ಭೇಟಿ ನೀಡಿದ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಉಮೇಶ್ ಕುಮಾರ್, ಪಂತ್ ಅವರಿಗೆ ವೈದ್ಯರು ಪ್ಲಾಸ್ಟಿಕ್ ಸರ್ಜರಿ ಮಾಡಿದ್ದಾರೆ. ಈ ಪ್ಲಾಸ್ಟಿಕ್ ಸರ್ಜರಿ ಮೊದಲ ಬಾರಿಗೆ ಇಂದು ಡ್ರೆಸ್ಸಿಂಗ್ ಮಾಡಿದ್ದಾರೆ. ಪಂತ್ ಅವರು ಆರೊಗ್ಯ ಸ್ಥಿತಿಯಲ್ಲಿ ಸುಧಾರಣೆಯಾಗುತ್ತಿದೆ. ನಿನ್ನೆಯ ಪರಿಸ್ಥಿತಿಗೆ ಹೋಲಿಕೆ ಮಾಡಿದರೆ, ಶೇ.10ರಷ್ಟು ಸುಧಾರಣೆ ಕಂಡಿದೆ ಎಂದು ತಿಳಿಸಿದ್ದಾರೆ.
ಪಂತ್ ಕಣ್ಣು ತೆರೆದು ನೋಡುತ್ತಿದ್ದಾರೆ. ಸ್ವಲ್ಪ ಮಾತನಾಡಲು ಸಹ ಯತ್ನಿಸುತ್ತಿದ್ದಾರೆ. ಬೆನ್ನುನೋವಿನಿಂದ ಅವರು ಸ್ವಲ್ಪ ತೊಂದರೆ ಅನುಭವಿಸುತ್ತಿದ್ದಾರೆ. ಸದ್ಯಕ್ಕೆ ಪಾದದ ಎಂಆರ್‌ಐ ಮಾಡಿಲ್ಲ. ಬಿಸಿಸಿಐ ವೈದ್ಯರ ತಂಡವು ಕೂಡ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ. ಪಂತ್ ಅವರಿಗೆ ಆಂತರಿಕ ಗಾಯಗಳಾಗಿವೆ. ಅಂತಹ ಪರಿಸ್ಥಿತಿಯಲ್ಲಿ ಚೇತರಿಸಿಕೊಳ್ಳಲು ಅವರು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಶೀಘ್ರದಲ್ಲೇ ರಿಷಭ್ ಪಂತ್ ಚೇತರಿಸಿಕೊಳ್ಳುವ ವಿಶ್ವಾಸ ಇದೆ. ಲಂಡನ್ನಿಂದ ಪಂತ್ ಅವರ ಸಹೋದರಿ ಸಾಕ್ಷಿ ಸಹ ಆಗಮಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನಿದ್ರೆಯ ಮಂಪರು, ಅತಿವೇಗದಿಂದ ಅಪಘಾತ: ರಿಷಭ್ ಪಂತ್ ದೆಹಲಿಗೆ ಏರ್ಲಿಫ್ಟ್ ಸಾಧ್ಯತೆ
ಇದೇ ವೇಳೆ ರಿಷಭ್ ಪಂತ್ ಅವರನ್ನು ಡೆಹ್ರಾಡೂನ್‌ನಿಂದ ಸ್ಥಳಾಂತರಿಸುವ ಕುರಿತು ಮ್ಯಾಕ್ಸ್ ಆಸ್ಪತ್ರೆ ಮತ್ತು ಬಿಸಿಸಿಐ ವೈದ್ಯರ ನಡುವೆ ಮಾತುಕತೆ ನಡೆಯುತ್ತಿದೆ. ರಿಷಭ್ ಪಂತ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ವೈದ್ಯರು ಸ್ಥಳಾಂತರಗೊಳಿಸಲು ನಿರಾಕರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ, ಮುಂದಿನ 24 ಗಂಟೆಗಳಲ್ಲಿ ರಿಷಬ್ ಪಂತ್ ಡೆಹ್ರಾಡೂನ್‌ನಿಂದ ಶಿಫ್ಟ್ ಮಾಡುವ ಸಾಧ್ಯತೆ ಸಹ ಕಡಿಮೆ ಇದೆ ಎಂದು ತಿಳಿದು ಬಂದಿದೆ.
ಡಿಸೆಂಬರ್ 30ರಂದು ಬೆಳಗ್ಗೆ 5 ಗಂಟೆ ಸುಮಾರಿಗೆ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ರೂರ್ಕಿಯ ನರ್ಸನ್ ಗಡಿಯಲ್ಲಿ ಕ್ರಿಕೆಟಿಗ ರಿಷಬ್ ಪಂತ್ ಕಾರು ಅಪಘಾತಕ್ಕೀಡಾಗಿತ್ತು. ಡಿವೈಡರ್ಗೆ ಕಾರು ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತ್ತು. ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಿಷಬ್ ಪಂತ್ ಅವರನ್ನು ಹರಿಯಾಣ ಬಸ್ ಚಾಲಕ ಮತ್ತು ನಿರ್ವಾಹಕರು ರಕ್ಷಣೆ ಮಾಡಿದ್ದರು. ಪಂತ್ ಅವರ ಹಣೆಯ ಮೇಲೆ ಎರಡು ಗಾಯಗಳಾಗಿವೆ. ಜೊತೆಗೆ ಬಲ ಮೊಣಕಾಲಿಗೆ ಪೆಟ್ಟು ಬಿದ್ದಿದೆ. ಬಲಗೈನ ಮಣಿಕಟ್ಟು, ಪಾದ, ಕಾಲಿನ ಬೆರಳು ಹಾಗು ಬೆನ್ನಿನ ಮೇಲೆ ಸವೆತದ ಗಾಯಗಳಾಗಿವೆ ಎಂದು ಬಿಸಿಸಿಐ ಹೇಳಿದೆ.
ಇದನ್ನೂ ಓದಿ: ರಿಷಭ್ ಪಂತ್ ತಾಯಿಯೊಂದಿಗೆ ಪ್ರಧಾನಿ ಮೋದಿ ಮಾತು, ಆರೋಗ್ಯ ವಿಚಾರಣೆ