ಕೌಶಂಬಿ (ಉತ್ತರಪ್ರದೇಶ): ಪ್ರಿಯಕರ ಮದುವೆಯಾಗಲು ನಿರಾಕರಿಸಿದ್ದಕ್ಕೆ ಮನನೊಂದ ಯುವತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೈನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಗಾಯಗೊಂಡ ಯುವತಿಯನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಸೈನಿ ಪ್ರದೇಶದ ಯುವತಿ ಮತ್ತು ಅದೇ ಗ್ರಾಮದ ಯುವಕ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ಸಂದರ್ಭದಲ್ಲಿ ದೈಹಿಕ ಸಂಪರ್ಕ ಹೊಂದಿದ್ದು, ಆಕೆ ಗರ್ಭಿಣಿಯಾಗಿದ್ದಾಳೆ. ಬಳಿಕ ಆತ ಆಹಾರದಲ್ಲಿ ಔಷಧಿ ಬೆರೆಸಿ ಗರ್ಭಪಾತ ಮಾಡಿಸಿದ್ದನಂತೆ. ಬಳಿಕ ಮದುವೆಯಾಗಲು ಒತ್ತಡ ಹೇರಿದ್ದಾಳೆ. ಯುವಕ ತನ್ನ ಅಕ್ಕ ಮದುವೆಯಾದ ನಂತರ ಮದುವೆಯ ಬಗ್ಗೆ ಪ್ರಸ್ತಾಪ ಮಾಡುವುದಾಗಿ ತಿಳಿಸಿದ್ದ. ಆದರೆ ಅಕ್ಕನ ವಿವಾಹವಾದರೂ ಸಹ ಆತ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಾನೆ. ಈ ಸಂಬಂಧ ಮಾತುಕತೆ ನಡೆಸಲು ಇಬ್ಬರು ಊರಿನ ಬಳಿ ಇರುವ ಕಾಡಿಗೆ ತೆರಳಿದ್ದು, ಅಲ್ಲಿ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಮದುವೆಗೆ ನಿರಾಕರಿಸಿದ್ದಲ್ಲದೆ, ತನಗೆ ಬೆಂಕಿ ಹಚ್ಚು ಎಂದು ಆತ ಹೇಳಿದ್ದಾನೆ. ಇದರಿಂದ ಕೋಪಗೊಂಡ ಯುವತಿ ತನಗೆ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಇದನ್ನು ಓದಿ: ಕ್ರಿಸ್ಮಸ್, ಹೊಸ ವರ್ಷಾಚರಣೆಗೆ ನಶೆ ಏರಿಸಲು ಮುಂದಾಗಿದ್ದ ಖದೀಮರು : ಬೆಂಗಳೂರಲ್ಲಿ ಡ್ರಗ್ಸ್ ಪೆಡ್ಲರ್ಸ್ ಅಂದರ್
ಬೆಂಕಿ ಉರಿಯುತ್ತಿರುವುದನ್ನು ಕಂಡ ಸ್ಥಳೀಯರು ತಕ್ಷಣವೇ ಸೈನಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಬೆಂಕಿ ನಂದಿಸಿ ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಕೆಯ ದೇಹದ ಭಾಗ ಶೇ. 90 ರಷ್ಟು ಸುಟ್ಟು ಕರಕಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪ್ರಯಾಗ್ ರಾಜ್ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.
ಪೊಲೀಸರು ಸಂತ್ರಸ್ತೆಯ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಬಲವಂತವಾಗಿ ಗರ್ಭಪಾತ ಮತ್ತು ಅತ್ಯಾಚಾರ ಎಸಗಿರುವುದಾಗಿ ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.