ನವದೆಹಲಿ: ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ರದ್ದುಗೊಳಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಮೇ 9ಕ್ಕೆ ಸುಪ್ರೀಂ ಕೋರ್ಟ್ ಮುಂದೂಡಿದ್ದು, ಅಲ್ಲಿಯವರೆಗೆ ಮುಸ್ಲಿಮರ ಮೀಸಲಾತಿ ಕೋಟಾ ರದ್ದುಗೊಳಿಸುವ ನಿರ್ಧಾರವನ್ನು ಜಾರಿಗೊಳಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ಗೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮುಸ್ಲಿಮರ 4% ಮೀಸಲಾತಿ ರದ್ದು ದೋಷಪೂರಿತ ಎಂದ ಸುಪ್ರೀಂ ಕೋರ್ಟ್
ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರಿಗಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಲು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ತೀರ್ಮಾನ ಪ್ರಶ್ನಿಸಿ ಮುಸ್ಲಿಂ ಸಮುದಾಯದ ಸದಸ್ಯರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಈ ಹಿಂದೆ ಏಪ್ರಿಲ್ 13ರಂದು ಅರ್ಜಿ ವಿಚಾರಣೆಗಳ ನಡೆಸಿದ್ದ ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್ ಮತ್ತು ಬಿವಿ ನಾಗರತ್ನ ಅವರ ನೇತೃತ್ವದ ನ್ಯಾಯ ಪೀಠವು ಮುಸ್ಲಿಮರ ಮೀಸಲಾತಿ ರದ್ದು ಮಾಡಿರುವುದು ಮೇಲ್ನೋಟಕ್ಕೆ ದೋಷಪೂರಿತ ಎಂಬಂತೆ ಕಂಡು ಬರುತ್ತಿದೆ ಎಂದು ಅಭಿಪ್ರಾಯಪಟ್ಟಿತ್ತು.
ಇದೇ ವೇಳೆ, ಮೀಸಲಾತಿ ವಿಚಾರದಲ್ಲಿ ಏಪ್ರಿಲ್ 18ರೊಳಗೆ ತನ್ನ ಪ್ರತಿಕ್ರಿಯೆ ಸಲ್ಲಿಸಲು ಕರ್ನಾಟಕ ಸರ್ಕಾರಕ್ಕೆ ನ್ಯಾಯಪೀಠ ಸೂಚಿಸಿತ್ತು. ಆದರೆ, ಏಪ್ರಿಲ್ 18ರಂದು ವಿಚಾರಣೆ ವೇಳೆ ಸರ್ಕಾರವು ತನ್ನ ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ಕೇಳಿತ್ತು. ಇದರಿಂದ ಇಂದಿಗೆ ವಿಚಾರಣೆಯನ್ನು ಸುಪ್ರೀಂ ಮುಂದೂಡಿಕೆ ಮಾಡಿತ್ತು. ಇಂದು ಕೂಡ ಕರ್ನಾಟಕ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ತಮ್ಮ ಪ್ರತಿಕ್ರಿಯೆ ಸಲ್ಲಿಸಲು ಸಮಯಾವಕಾಶ ಕೋರಿದರು. ಇದೇ ವೇಳೆ ಮೇ 9ರವರೆಗೆ ಸರ್ಕಾರದ ಆದೇಶದ ಆಧಾರದ ಮೇಲೆ ಯಾವುದೇ ಪ್ರವೇಶ ಅಥವಾ ನೇಮಕಾತಿ ನಡೆಯುವುದಿಲ್ಲ ಎಂದು ಮತ್ತೊಮ್ಮೆ ಭರವಸೆ ನೀಡಿದರು. ಆ ಬಳಿಕ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮೇ 9ಕ್ಕೆ ಮುಂದೂಡಿ ಆದೇಶಿಸಿತು.
ಇಂದಿನ ವಿಚಾರಣೆಯಲ್ಲಿ ನಡೆದಿದ್ದೇನು?: ಇಂದು ನಿಗದಿಯಂತೆ ಸುಪ್ರೀಂ ಅರ್ಜಿಗಳ ವಿಚಾರಣೆಯನ್ನು ಆರಂಭಿಸಿತ್ತು. ಪ್ರಾರಂಭದಲ್ಲೇ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ನಾನು ಇಂದು ಪ್ರತಿಕ್ರಿಯೆ ಸಲ್ಲಿಸಬೇಕಿತ್ತು. ಆದರೆ, ಸಮಸ್ಯೆಯೆಂದರೆ ನಾನು ಸಲಿಂಗ ವಿಚಾರದ ಬಗ್ಗೆ ವಾದ ಮಂಡಿಸುತ್ತಿರುವ ಸಾಲಿಸಿಟರ್ ಜನರಲ್. ವಿವಾಹಕ್ಕೆ ಸಂಬಂಧಿಸಿದ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿರುವ ಸಂವಿಧಾನ ಪೀಠದ ಮುಂದೆ ವಾದಿಸುತ್ತಿರುವುದರಿಂದ ನಾನು ವೈಯಕ್ತಿಕ ಸಮಸ್ಯೆಯಲ್ಲಿದ್ದೇನೆ. ಆದ್ದರಿಂದ ಈ ವಿಷಯವನ್ನು ಬೇರೆ ದಿನಕ್ಕೆ ಮುಂದೂಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಷ್ಯಂತ್ ದವೆ, ವಿಚಾರಣೆ ಮುಂದೂಡಬೇಕು ಎಂಬ ಮೆಹ್ತಾ ಅವರ ಮನವಿಯನ್ನು ವಿರೋಧಿಸಿದರು. ಅಲ್ಲದೇ, ಈಗಾಗಲೇ ವಿಚಾರಣೆಯನ್ನು ನಾಲ್ಕು ಬಾರಿ ಮುಂದೂಡಲಾಗಿದೆ ಎಂದು ನ್ಯಾಯ ಪೀಠದ ಗಮನ ಸೆಳೆದರು.
ಈ ವೇಳೆ ನ್ಯಾಯಾಲಯ ನೀಡಿರುವ ಮಧ್ಯಂತರ ಆದೇಶ ಈಗಾಗಲೇ ಅರ್ಜಿದಾರರ ಪರವಾಗಿದೆ ಎಂದು ಮೆಹ್ತಾ ಹೇಳಿದರು. ಆಗ ಮುಸ್ಲಿಮರ ಕೋಟಾವನ್ನು ರದ್ದುಗೊಳಿಸಿದ ಆದೇಶ ಜಾರಿಗೊಳಿಸಲಾಗುವುದಿಲ್ಲ ಎಂಬ ಈ ಹಿಂದಿನ ಹೇಳಿಕೆಯನ್ನು ಮುಂದಿನ ವಿಚಾರಣೆಯ ದಿನಾಂಕದವರೆಗೆ ವಿಸ್ತರಿಸುವಂತೆ ದುಷ್ಯಂತ್ ದವೆ ನ್ಯಾಯಾಲಯವನ್ನು ಕೋರಿದರು. ಇದಕ್ಕೆ ನ್ಯಾಯಪೀಠ ಸಮ್ಮಿತಿಸಿತು.
ಇದನ್ನೂ ಓದಿ: ಮುಸ್ಲಿಮರಿಗೆ ಮೀಸಲಾತಿ ರದ್ದು: ಸುಪ್ರೀಂನಲ್ಲಿ ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ಕೇಳಿದ ಕರ್ನಾಟಕ ಸರ್ಕಾರ