ಕಾನ್ಪುರ (ಉತ್ತರ ಪ್ರದೇಶ): ಇಂದಿರಾ ಗಾಂಧಿ ಅವರ ಹತ್ಯೆ ಹಿನ್ನೆಲೆ 1984 ರಲ್ಲಿ ಕಾನ್ಪುರದಲ್ಲಿ ನಡೆದ ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದಂತೆ ಒಂಬತ್ತು ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಇದುವರೆಗೆ ಕನಿಷ್ಠ 41 ಆರೋಪಿಗಳನ್ನು ಬಂಧಿಸಲಾಗಿದೆ. ಈ ದಂಗೆಯಲ್ಲಿ 127 ಜನ ಮೃತಪಟ್ಟಿದ್ದರು. ವಿಶೇಷ ತನಿಖಾ ತಂಡ (SIT) ಇದರ ತನಿಖೆಯನ್ನು ಬುಧವಾರ ಕೊನೆಗೊಳಿಸಿದೆ.
ಆದರೆ, ಇನ್ನೂ ಕೆಲವು ಆರೋಪಿಗಳನ್ನು ಬಂಧಿಸಲಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮಾಹಿತಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ನೀಡಲಾಗಿದೆ. ಅಧಿಕಾರಾವಧಿಯನ್ನು ಇನ್ನೂ ಒಂದು ತಿಂಗಳು ವಿಸ್ತರಿಸಿದರೆ, ಸರಿಯಾದ ಸಮಯದಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಎಸ್‌ಐಟಿ ಮುಖ್ಯಸ್ಥರಾಗಿರುವ ಡಿಐಜಿ ಬಲೇಂದು ಭೂಷಣ್ ಸಿಂಗ್ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಸ್‌ಐಟಿ ಅವಧಿಯನ್ನು ಒಂದು ತಿಂಗಳು ವಿಸ್ತರಿಸುವ ಸಾಧ್ಯತೆ ಇದೆ. ಬುಧವಾರ ತಡರಾತ್ರಿ ಈ ಕುರಿತು ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.
ಇದನ್ನೂ ಓದಿ: '1984ರ ದಂಗೆ ಅಸಾಧ್ಯ ನೋವು ನೀಡಿತ್ತು'... ಸ್ಯಾಮ್ ಪಿತ್ರೋಡಾ ಹೇಳಿಕೆ ಖಂಡಿಸಿದ ರಾಗಾ
ಗಲಭೆಗೆ ಸಂಬಂಧಿಸಿದ ಪ್ರಕರಣಗಳ ಮರು ತನಿಖೆಗಾಗಿ ಮೂರು ವರ್ಷಗಳ ಹಿಂದೆ ಉತ್ತರ ಪ್ರದೇಶ ಸರ್ಕಾರವು ಎಸ್‌ಐಟಿಯನ್ನು ರಚಿಸಿತ್ತು. ಸಿದ್ಧ ಗೋಪಾಲ್ ಗುಪ್ತಾ ಅಲಿಯಾಸ್ ಬಬ್ಬು (66) ಮತ್ತು ಜಿತೇಂದ್ರ ಕುಮಾರ್ ತಿವಾರಿ ಅಲಿಯಾಸ್ ರಾಜಾ ಬಾಬು (58) ಮತ್ತು ಕಿದ್ವಾಯಿ ನಗರದ ನಿವಾಸಿಗಳು ಬಂಧಿತ ಆರೋಪಿಗಳಾಗಿದ್ದಾರೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿಗಳ ವಿರುದ್ಧ ಐಪಿಸಿಯ ಸೆಕ್ಷನ್ 396 (ಕೊಲೆಯೊಂದಿಗೆ ದರೋಡೆ) ಮತ್ತು 436 (ಬೆಂಕಿ ಅಥವಾ ಸ್ಫೋಟಕ ವಸ್ತುಗಳಿಂದ ಕಿಡಿಗೇಡಿತನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.