ಹೈದರಾಬಾದ್: ಟೆಲಿವಿಷನ್ ಸಂದರ್ಶನವೊಂದರಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಈಗಾಗಲೇ ಪಕ್ಷ ಅಮಾನತುಗೊಳಿಸಿದೆ. ಹೇಳಿಕೆ ಕುರಿತು ಈಗಾಗಲೇ ಕ್ಷಮೆ ಯಾಚಿಸಿರುವ ಶರ್ಮಾ, ತಮ್ಮ ಮಾತುಗಳನ್ನು ಹಿಂಪಡೆದಿದ್ದಾರೆ. ಈ ಬೆನ್ನಲ್ಲೇ ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ವೊಂದನ್ನ ಹಾಕಿದ್ದು, ನೂಪುರ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ನೂಪುರ್ ಶರ್ಮಾ ಆಕ್ಷೇಪಾರ್ಹ ಹೇಳಿಕೆಯನ್ನ ಸಮರ್ಥಿಸಿಕೊಂಡಿರುವ ನಟಿ ಕಂಗನಾ ರಣಾವತ್, 'ನೂಪುರ್ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಂಪೂರ್ಣ ಅರ್ಹತೆ ಹೊಂದಿದ್ದಾರೆ. ಅವರಿಗೆ ಎಲ್ಲೆಡೆಯಿಂದ ಬರುತ್ತಿರುವ ಬೆದರಿಕೆ ಕರೆಗಳನ್ನ ನಾನು ನೋಡುತ್ತಿದ್ದೇನೆ. ನಿತ್ಯ ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸಿದಾಗ ನಾವು ನ್ಯಾಯಾಲಯ ಮೊರೆ ಹೋಗಬೇಕು. ದೇಶದಲ್ಲಿ ಚುನಾಯಿತ ಬಿಜೆಪಿ ಸರ್ಕಾರವಿದೆ. ಇದು ಅಫ್ಘಾನಿಸ್ತಾನ ಅಲ್ಲ, ನಿಮ್ಮ ವಿಚಾರವನ್ನು ನ್ಯಾಯಾಲಯದಲ್ಲಿ ಹಂಚಿಕೊಳ್ಳಿ' ಎಂದು ಹೇಳಿದ್ದಾರೆ.
ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಕೋಲಾಹಲ ಸೃಷ್ಟಿಸಿದ ನೂಪುರ್ ಶರ್ಮಾ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇರೆಗೆ ಮುಂಬ್ರಾ ಪೊಲೀಸ್ ಠಾಣೆಯಲ್ಲಿ ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ದೂರು ದಾಖಲಾಗಿದೆ. ಇರಾನ್, ಕುವೈತ್ನಂತಹ ಇಸ್ಲಾಮಿಕ್ ರಾಷ್ಟ್ರಗಳು ಶರ್ಮಾ ವಿವಾದಾತ್ಮಕ ಹೇಳಿಕೆ ಬಗ್ಗೆ ಭಾರತೀಯ ರಾಯಭಾರಿಗಳಿಗೆ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ಜೊತೆಗೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಪ್ರಾರ್ಥನೆ ವೇಳೆ ಕೋಮು ಘರ್ಷಣೆ ನಡೆದಿತ್ತು. ಈ ವಿವಾದವು ಹಿಂಸಾಚಾರಕ್ಕೆ ತಿರುಗಿ ಅನೇಕರು ಗಾಯಗೊಂಡಿದ್ದರು.
ಇದನ್ನೂ ಓದಿ: ವಿವಾದಿತ ಹೇಳಿಕೆ: ಬಿಜೆಪಿಯಿಂದ ನೂಪುರ್ ಶರ್ಮಾ, ನವೀನ್ ಜಿಂದಾಲ್ ಅಮಾನತು