ನವದೆಹಲಿ: ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರು ಸೇವಾ ನಿವೃತ್ತಿ ಹೊಂದಿದ್ದು, ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರು ಇಂದು ಭಾರತದ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಪ್ರಮಾಣ ವಚನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಿದರು. ನ.10, 2024 ರವರೆಗೆ ಇವರು ಅಧಿಕಾರ ಹೊಂದಿರುತ್ತಾರೆ.
ಸಿಜೆಐ ಆಗಿ ಕಾರ್ಯ ನಿರ್ವಹಿಸಿದ ತಂದೆ, ಮಗ: ನ್ಯಾಯಮೂರ್ತಿ ಚಂದ್ರಚೂಡ್ ಅವರ ತಂದೆ ನ್ಯಾಯಮೂರ್ತಿ ವೈ.ವಿ ಚಂದ್ರಚೂಡ್ ಅವರು ಫೆಬ್ರವರಿ 2, 1978 ರಿಂದ ಜುಲೈ 11, 1985 ರವರೆಗೆ ಭಾರತದ 16ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ನ್ಯಾಯಾಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 'ತಂದೆ ಮತ್ತು ಮಗ ಸಿಜೆಐ' ಆಗಿದ್ದಾರೆ.
ನ್ಯಾಯಮೂರ್ತಿ ಚಂದ್ರಚೂಡ್ ಅವರು ದೇಶದ ಪ್ರಗತಿಪರ ಮತ್ತು ಉದಾರವಾದಿ ನ್ಯಾಯಾಧೀಶರೆಂದು ಪ್ರಸಿದ್ಧರು. ನಾಗರಿಕರ ಮೂಲಭೂತ ಹಕ್ಕುಗಳ ಬಗ್ಗೆ ಬಹಳ ಸಂವೇದನಾಶೀಲ ವ್ಯಕ್ತಿ ಎಂದು ಪರಿಗಣಿಸಲ್ಪಟ್ಟಿದ್ದಾರೆ.
ಉಪರಾಷ್ಟ್ರಪತಿ ಜಗದೀಪ್ ಧಂಖರ್, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಸುಪ್ರೀಂ ಕೋರ್ಟ್ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಇಂದು ಡಿವೈ ಚಂದ್ರಚೂಡ್ ಪ್ರಮಾಣ