ಸಂಭಲ್ಪುರ (ಒಡಿಶಾ): ಜಿಲ್ಲಾ ನ್ಯಾಯಾಧೀಶ ಮಾನಸ್ ಬಾರಿಕ್ ಅವರ ಕೊಠಡಿ ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 8 ವಕೀಲರನ್ನು ಗುರುವಾರ ಬಂಧಿಸಲಾಗಿದೆ. ಒಡಿಶಾ ಹೈಕೋರ್ಟ್‌ನ ಪ್ರತ್ಯೇಕ ಪೀಠ ಸ್ಥಾಪನೆಗೆ ಒತ್ತಾಯಿಸಿ ಡಿಸೆಂಬರ್ 13 ರಂದು ನಡೆದ ಪ್ರತಿಭಟನೆ ವೇಳೆ ವಕೀಲರು ಜಿಲ್ಲಾ ನ್ಯಾಯಾಧೀಶರ ಕೊಠಡಿಯೊಳಗೆ ನುಗ್ಗಿ, ಕೊಠಡಿ ಧ್ವಂಸ ಮಾಡಿದ್ದರು.
ಬಂಧಿತರಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸುರೇಶ್ವರ ಮಿಶ್ರಾ ಕೂಡ ಸೇರಿದ್ದು, ಘಟನೆಯಲ್ಲಿ ಭಾಗಿಯಾಗಿರುವ ಇತರರನ್ನು ಬಂಧಿಸಲು ಪೊಲೀಸರು ಹಲವೆಡೆ ದಾಳಿ ನಡೆಸುತ್ತಿದ್ದಾರೆ. ಅಲ್ಲಿಗೆ ಈವರೆಗೆ ಬಂಧಿತರಾದ ವಕೀಲರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.
ಇದಕ್ಕೂ ಮುನ್ನ ಈ ಪ್ರಕರಣದಲ್ಲಿ 15 ವಕೀಲರನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ 8 ಮಂದಿಯ ಬಂಧನದೊಂದಿಗೆ ಈ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ವಕೀಲರು ತಮ್ಮ ಮುಷ್ಕರವನ್ನು ಬೇಷರತ್ತಾಗಿ ಹಿಂಪಡೆಯುವಂತೆ ಬುಧವಾರ ಸುಪ್ರೀಂಕೋರ್ಟ್ ವಕೀಲರ ಸಂಘಗಳ ಕೇಂದ್ರ ಕ್ರಿಯಾ ಸಮಿತಿಗೆ ಸೂಚಿಸಿದೆ. ವರ್ಚುಯಲ್ ಕೋರ್ಟ್‌ಗಳು ಮತ್ತು ಇ-ಫೈಲಿಂಗ್‌ನಂತಹ ತಂತ್ರಜ್ಞಾನದ ಬಳಕೆ ವ್ಯಾಪಕವಾಗಿರುವ ದಿನ ಮತ್ತು ಯುಗದಲ್ಲಿ ಹೊಸ ಪೀಠಗಳನ್ನು ರಚಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ರಾಜ್ಯದಲ್ಲಿ ವಕೀಲರ ಮುಷ್ಕರವನ್ನು ನಿಭಾಯಿಸುವಲ್ಲಿ ವಿಫಲವಾದ ಬಗ್ಗೆ ಒಡಿಶಾ ಪೊಲೀಸ್ ಡಿಜಿ ಮತ್ತು ಸಂಬಲ್‌ಪುರ ಐಜಿಪಿಯನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಒಡಿಶಾ ಪೊಲೀಸರಿಗೆ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ ನಾವು ಕೇಂದ್ರ ಪಡೆಗಳನ್ನು ನಿಯೋಜಿಸುತ್ತೇವೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಇದನ್ನೂ ಓದಿ: ಅರೆಸೇನಾ ಪಡೆ ಕಳುಹಿಸುತ್ತೇವೆ.. ವಕೀಲರ ಪ್ರತಿಭಟನೆ ತಡೆಯದ ಒಡಿಶಾ ಪೊಲೀಸ್ ವಿರುದ್ಧ ಸುಪ್ರೀಂ ಗರಂ