ಚೆನ್ನೈ (ತಮಿಳುನಾಡು) : ಅಕ್ರಮ ಭೂ ಕಬಳಿಕೆದಾರರ ಬಗ್ಗೆ ವರದಿ ಮಾಡಿದ ಪತ್ರಕರ್ತನೊಬ್ಬನನ್ನು ಹತ್ಯೆ ಮಾಡಲಾಗಿದೆ.
ಖಾಸಗಿ ವಾಹಿನಿಯ ವರದಿಗಾರ ಮೋಸೆಸ್ (28) ಮೃತ ಪತ್ರಕರ್ತ. ಆರು ತಿಂಗಳ ಹಿಂದೆ ಪದಿಯನಲ್ಲೂರು ಕೆರೆ ಪ್ರದೇಶದಲ್ಲಿ ಅಕ್ರಮ ಭೂ ಕಬಳಿಕೆ ಮಾಡಿರುವ ಬಗ್ಗೆ ಮೋಸೆಸ್ ವರದಿ ಮಾಡಿದ್ದ. ಮೋಸೆಸ್ಗೆ ಈ ಹಿಂದೆಯೇ ಕೊಲೆ ಬೆದರಿಕೆಗಳು ಬಂದಿದ್ದವು. ಈ ಬಗ್ಗೆ ಆತನ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ತಂದೆಯೊಂದಿಗೆ ಮನೆಗೆ ಹಿಂದಿರುವಾಗ ಮೂವರು ಅಪರಿಚಿತರು ಮೋಸೆಸ್ ಮೇಲೆ ದಾಳಿ ಮಾಡಿ ಹಲವು ಬಾರಿ ಮಾರಕಾಸ್ತ್ರಗಳಿಂದ ಇರಿದಿದ್ದರು. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾನೆ.
ಈ ಕುರಿತು ಸೊಮಂಗಲಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು, ನಲ್ಲೂರಿನ ವಿಘ್ನೇಶ್ ಎಲಿ ಅಪ್ಪು, ಅತ್ತೈ ವೆಂಕಟೇಶ್, ಮನೋಜ್ ಮತ್ತು ನವಮಣಿ ಎಂಬ ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ.