ಸಿನಿಮಾರಂಗಕ್ಕೆ ಸಾವಿರಾರು ಮಂದಿ ಬರ್ತಾರೆ, ಹೋಗ್ತಾರೆ. ಆದರೆ ತಮ್ಮ ವಿಶೇಷ ಅಭಿನಯದ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಬಹುಕಾಲ ಉಳಿಯುವವರು ಕೆಲವರು ಮಾತ್ರ. ಕಾಲಿವುಡ್ ಸೂಪರ್ಸ್ಟಾರ್ ಸೂರ್ಯ ಅಭಿನಯದ 'ಜೈ ಭೀಮ್' ಸಿನಿಮಾದಲ್ಲಿ ನಟಿಸಿರುವ ಲಿಜೋಮೋಲ್ ಜೋಸ್ ತಮ್ಮ ಪಾತ್ರಕ್ಕೆ ನೂರಕ್ಕೆ ನೂರರಷ್ಟು ನ್ಯಾಯ ಒದಗಿಸಿದ್ದಾರೆ ಅನ್ನೋದು ಸಿನಿಮಾಪ್ರಿಯರ ಮೆಚ್ಚುಗೆಯ ನುಡಿ.
ಬಾಲಕಿಯೊಬ್ಬಳ ತಾಯಿಯಾಗಿ ಮತ್ತು ಗರ್ಭಿಣಿಯಾಗಿ ನಟಿಸಿರುವ ಜೋಸ್ ಅವರ ನಟನೆಗೆ ಹೊಗಳಿಕೆಯ ಸುರಿಮಳೆಯೇ ಆಗುತ್ತಿದೆ. ಸಣ್ಣಮ್ಮನ ಪಾತ್ರದಲ್ಲಿ ಲಿಜೋಮೋಲ್ ಜೋಸ್ ತನ್ಮಯತೆ ಹೇಗಿತ್ತೆಂದರೆ, ಶೂಟಿಂಗ್ ನಡೆದು ಕೆಲವು ದಿನಗಳವರೆಗೂ ಕೂಡಾ ತಾನು ಲಿಜೋಮೋಲ್ ಎಂಬುದೇ ಮರೆತುಹೋಗಿತ್ತಂತೆ.!

ಸಿನಿಮಾದಲ್ಲಿ ಸೂರ್ಯ ಪಾತ್ರ ಒಂದೆಡೆಯಾದರೆ, ಈಕೆಯ ಪಾತ್ರಕ್ಕೂ ಕೂಡಾ ಅಷ್ಟೇ ತೂಕವಿದೆ, ಮಹತ್ವವಿದೆ. ಆಕೆಯೇ ಹೇಳುವಂತೆ ಪಾತ್ರ ನಿರ್ವಹಿಸುವಾಗ ಗ್ಲಿಸರಿನ್ ಇಲ್ಲದೆಯೇ ಆಗಾಗ ಕಣ್ಣೀರು ಬರುತ್ತಿತ್ತಂತೆ. ಈ ಪ್ರತಿಭಾವಂತ ನಟಿಯ ಬಗೆಗಿನ ಕೆಲವು ಮಾಹಿತಿ ಇಲ್ಲಿದೆ.
ಕೇರಳದಲ್ಲಿ ಹುಟ್ಟಿದ ಲಿಜೋಮೋಲ್ ಅಮೆರಿಕನ್ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಸೈನ್ಸ್‌ನಿಂದ ಪದವಿ, ಪಾಂಡಿಚೇರಿ ವಿಶ್ವವಿದ್ಯಾಲಯದಿಂದ 'ಮಾಹಿತಿ ಮತ್ತು ಗ್ರಂಥಾಲಯ ವಿಜ್ಞಾನ'ದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪದವಿಯ ನಂತರ ಟಿವಿಯಲ್ಲಿಯೂ ಕೆಲ ಕಾಲ ಲಿಜೋಮೋಲ್ ಕೆಲಸ ಮಾಡಿದ್ದಾರೆ.

ಸ್ನೇಹಿತರ ವಾಟ್ಸಪ್ ಗ್ರೂಪ್ನಲ್ಲಿ ಬಂದಿದ್ದ ಸಿನಿಮಾವೊಂದಕ್ಕೆ ಆಡಿಷನ್ ಕುರಿತ ಸುದ್ದಿ ತಿಳಿದು, ಫೋಟೋಗಳನ್ನು ಕಳುಹಿಸಿದ್ದ ಆಕೆ ಫವಾದ್ ಫಾಜಿಲ್ ನಾಯಕತ್ವದ 'ಮಹೇಶಿಂಟೆ ಪ್ರತೀಕಾರಂ' ಚಿತ್ರಕ್ಕೆ ಆಯ್ಕೆಯಾಗಿ ಚೊಚ್ಚಲ ಚಿತ್ರದಲ್ಲೇ ಮೆಚ್ಚುಗೆ ಗಳಿಸಿಕೊಂಡಿದ್ದರು.

ಇದಷ್ಟೇ ಅಲ್ಲದೇ ಕಟ್ಟಪ್ಪನಾಯಿಲೆ ರಿತ್ವಿಕ್ ರೋಷನ್, ಹನಿ ಬೀ 2.5, ಸ್ಟ್ರೀಟ್ ಲೈಟ್ಸ್, ಪ್ರೇಮೋತ್ಸವಂ, ಒಟ್ಟಕೊರು ಕಾಮುಕನ್, ಶಿವಪ್ಪು ಮಂಜಲ್ ಪಿಚೈ, ತೀಥುಂ ನಂದ್ರುಮ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ವಿರಾಟ್ ನೀವೊಬ್ಬ 'ಅದ್ಭುತ ಮನುಷ್ಯ': ಅನುಷ್ಕಾ ಶರ್ಮಾ ಗುಣಗಾನ