ಕಥುವಾ (ಜಮ್ಮು ಮತ್ತು ಕಾಶ್ಮೀರ) : ಪಾಕಿಸ್ತಾನದ ಜೈಲಿನಲ್ಲಿ ಬರೋಬ್ಬರಿ 29 ವರ್ಷಗಳನ್ನು ಕಳೆದು ನರಕಯಾತನೆ ಅನುಭವಿಸಿ ಜಮ್ಮು ಮತ್ತು ಕಾಶ್ಮೀರದ ಕಥುವಾವೆ ಹಿಂದಿರುಗಿದ ವ್ಯಕ್ತಿಗೆ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಅದ್ದೂರಿ ಸ್ವಾಗತ ಕೋರಿದ್ದಾರೆ.
ಕಥುವಾ ಜಿಲ್ಲೆಯ ಮಕ್ವಾಲ್ ಗ್ರಾಮದ ಕುಲದೀಪ್ ಸಿಂಗ್ ಎಂಬುವರು 1992ರ ಡಿಸೆಂಬರ್‌ನಲ್ಲಿ ಆಕಸ್ಮಿಕವಾಗಿ ಅಂತಾರಾಷ್ಟ್ರೀಯ ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿ ಪಾಕ್ ಸೇನೆಯಿಂದ ಬಂಧನಕ್ಕೊಳಗಾಗಿದ್ದರು. ಅವರ ಮೇಲೆ ಗೂಢಚಾರ ಆರೋಪದಡಿ ಪ್ರಕರಣ ದಾಖಲಿಸಲಾಯಿತು. ವಿಚಾರಣೆಗಳ ಬಳಿಕ ಪಾಕಿಸ್ತಾನದ ನ್ಯಾಯಾಲಯ ಕುಲದೀಪ್ ಸಿಂಗ್ಗೆ 25 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಪಾಕಿಸ್ತಾನದ ಕೋಟ್ ಲಖ್‌ಪತ್ ಜೈಲಿನಲ್ಲಿದ್ದ ಅವರನ್ನು ಮರಳಿ ಕರೆ ತರಲು ಭಾರತೀಯ ಹೈಕಮಿಷನ್ ನಿರಂತರ ಕಾನೂನು ಹೋರಾಟ ನಡೆಸಿತ್ತು. ಇದೀಗ ಸಿಂಗ್ ಜೈಲಿನಿಂದ ಬಿಡುಗಡೆಯಾಗಿ ಡಿಸೆಂಬರ್ 20ರಂದು ಅಮೃತಸರದ ವಾಘಾ ಗಡಿಯ ಮೂಲಕ ಭಾರತಕ್ಕೆ ಮರಳಿದರು. 29 ವರ್ಷಗಳ ಬಳಿಕ ತಮ್ಮ ಕುಟುಂಬವನ್ನು ಸೇರಿದ್ದಾರೆ.
ಇದನ್ನೂ ಓದಿ: ಬ್ರಿಟನ್ ರಾಣಿ ಎಲಿಜಬೆತ್ ಹತ್ಯೆಗೆ ಯತ್ನ; ಭಾರತ ಮೂಲದ ವ್ಯಕ್ತಿಯ ಬಂಧನ
"ಪಾಕಿಸ್ತಾನ ಸೇನೆಯ ಬಲೆಗೆ ಬೀಳುವ ಪ್ರತಿಯೊಬ್ಬ ಭಾರತೀಯನನ್ನು ಗೂಢಚಾರಿ ಎಂದು ಪರಿಗಣಿಸಲಾಗುತ್ತದೆ. ಅಂತವರು ಪಾಕ್ ಜೈಲಿನಲ್ಲಿ ಚಿತ್ರಹಿಂಸೆಗೆ ಗುರಿಯಾಗುತ್ತಾರೆ. ನಮ್ಮ ಮೇಲೆ ಯಾವುದೇ ಮಾನವೀಯತೆಯನ್ನು ತೋರಿಸುವುದಿಲ್ಲ. ಆದರೆ, ನಾನೆಂದಿಗೂ ನನ್ನ ನಂಬಿಕೆ ಕಳೆದುಕೊಂಡಿರಲಿಲ್ಲ. ಅದರಂತೆ ನನಗೀಗ ಹೊಸ ಜೀವನ ಸಿಕ್ಕಿದೆ. ತನ್ನ ಕುಟುಂಬದೊಂದಿಗೆ ಮತ್ತೆ ಒಂದಾಗಲು ಸಾಧ್ಯವಾಗಿದ್ದರಿಂದ ತುಂಬಾ ಸಂತೋಷವಾಗಿದೆ" ಎಂದು ಸಿಂಗ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಇನ್ನೂ ಇಬ್ಬರು ವ್ಯಕ್ತಿಗಳು ಪಾಕಿಸ್ತಾನದ ಜೈಲಿನಲ್ಲಿ ತಮ್ಮ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಅಷ್ಟೇ ಅಲ್ಲ, ಪಾಕ್ ಭದ್ರತಾ ಪಡೆಗಳಿಂದ ಹಿಂಸೆಗೆ ಒಳಪಟ್ಟ 10 ರಿಂದ 12 ಭಾರತೀಯರು ಪಾಕಿಸ್ತಾನದ ಮಾನಸಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಕಠು ಸತ್ಯವನ್ನು ಕುಲದೀಪ್ ಸಿಂಗ್ ಬಿಚ್ಚಿಟ್ಟಿದ್ದಾರೆ.