ತಿರುವನಂತಪುರಂ ( ಕೇರಳ) : ಕಮ್ಯುನಿಸ್ಟ್ ಪಾರ್ಟಿ ಮಾರ್ಕ್ಸ್ವಾದಿ (ಸಿಪಿಎಂ) ನೇತೃತ್ವದ ಕೇರಳದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ದೊಡ್ಡ ಸವಾಲು ಎದುರಿಸುತ್ತಿದೆ. ಈ ಹಿಂದಿನ ಯಾವುದೇ ಚುನಾವಣೆಗಳ ಸಂದರ್ಭಗಳಲ್ಲಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಎಲ್‌ಡಿಎಫ್ ಇಷ್ಟು ಹೆಣಗಾಡಿದಿಲ್ಲ.
ಸಾಮಾನ್ಯವಾಗಿ, ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ತನ್ನ ಅಭ್ಯರ್ಥಿಗಳನ್ನು ಘೋಷಿಸುವ ಮೊದಲು ಎಡ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಘೋಷಿಸುತ್ತವೆ ಮತ್ತು ಕ್ಷೇತ್ರದಲ್ಲಿ ಮೊದಲ ಸುತ್ತಿನ ಪ್ರಚಾರವನ್ನೂ ಪೂರ್ಣಗೊಳಿಸುತ್ತವೆ. ಈ ಬಾರಿ, ಕೇರಳದಲ್ಲಿ ಬಿಜೆಪಿ ಅಖಾಡಕ್ಕೆ ಇಳಿದಿರುವ ಕಾರಣ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ. ಹಾಗಾಗಿ, ಅಭ್ಯರ್ಥಿಗಳ ಆಯ್ಕೆಯ ಸಂದರ್ಭದಲ್ಲಿ ಎಲ್‌ಡಿಎಫ್ ಒಕ್ಕೂಟದೊಳಗೆ ಉಂಟಾಗುವ ಅಸಮಧಾನಗಳು ಚುನಾವಣಾ ಫಲಿತಾಂಶದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುವುದನ್ನು ಕಾದು ನೋಡಬೇಕಿದೆ.
ಈಗಾಗಲೇ ಎಲ್‌ಡಿಎಫ್ ಒಕ್ಕೂಟದ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಿಸಿದ ನಂತರವೂ ಮಂಜೇಶ್ವರ, ಕುತ್ಯಾಡಿ ಮತ್ತು ಪಿರಾವೋಮ್ ಕ್ಷೇತ್ರಗಳಲ್ಲಿ ಬಿಕ್ಕಟ್ಟು ಮುಂದುವರೆದಿದೆ. ಹೀಗಾಗಿ, ಇದೇ ಮೊದಲ ಬಾರಿಗೆ ಅಭ್ಯರ್ಥಿ ಘೋಷಣೆಯನ್ನು ಮುಂದೂಡುವುದು ಎಲ್ಡಿಎಫ್ಗೆ ಅನಿವಾರ್ಯವಾಗಿದೆ. ಸಿಪಿಎಂ ಜೊತೆಗೆ ಸಿಪಿಐ ಕೂಡ ಮೊದಲ ಹಂತದ ಅಭ್ಯರ್ಥಿಗಳನ್ನು ಘೋಷಿಸುವುದಕ್ಕೆ ತಡೆಯೊಡ್ಡಿವೆ.
ಇದನ್ನೂ ಓದಿ: ಇ.ಶ್ರೀಧರನ್ ಪಾಲಕ್ಕಾಡ್‌ನಿಂದ ಸ್ಪರ್ಧಿಸುವ ಸಾಧ್ಯತೆ
ಸಿಪಿಎಂ ದೇವಿಕುಲಂ ಮತ್ತು ಮಂಜೇಶ್ವರಂದಲ್ಲಿ ಮತ್ತು ಸಿಪಿಐ ಚಡಯಮಂಗಲಂ, ಹರಿಪ್ಪಾಡ್, ಪರವೂರ್ ಮತ್ತು ನಾಟಿಕಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿಲ್ಲ. 2006 ರಲ್ಲಿ ವಿ.ಎಸ್ ಅಚ್ಯುತಾನಂದನ್ ಅವರ ಉಮೇದುವಾರಿಕೆ, ಲೋಕಸಭಾ ಚುನಾವಣೆಗೆ 2009 ರಲ್ಲಿ ಪೊನ್ನಾನಿಯಲ್ಲಿ ಅಭ್ಯರ್ಥಿ ಆಯ್ಕೆ, 2014 ರಲ್ಲಿ ತಿರುವನಂತಪುರಂನಲ್ಲಿ ಸಂಸತ್ ಕ್ಷೇತ್ರದ ಉಮೇದುವಾರಿಕೆ ಎಲ್ಲವೂ ಎಲ್‌ಡಿಎಫ್‌ನೊಳಗಿನ ಗೊಂದಲಗಳಿಗೆ ಕಾರಣವಾಗಿತ್ತು.
2011 ರಲ್ಲಿ ಸಿಪಿಐ ಅಶ್ರಫ್ ಅಲಿ ಕಲತಿಲ್ ಅವರನ್ನು ಎರ್ನಾಡ್ ಕ್ಷೇತ್ರದಲ್ಲಿ ಕಣಕ್ಕಿಳಿಸಿತ್ತು. ಆದಾಗ್ಯೂ, ಸಿಪಿಎಂ ಪಕ್ಷೇತರ ಅಭ್ಯರ್ಥಿ ಪಿ.ವಿ ಅನ್ವರ್ ಅವರನ್ನು ಬಹಿರಂಗವಾಗಿ ಬೆಂಬಲಿಸಿತ್ತು. ಇದು ಎಲ್ಡಿಎಫ್ನಲ್ಲಿ ಸಂಘರ್ಷಕ್ಕೆ ಕಾರಣವಾಗಿತ್ತು. ಗೆಲುವು ಅಥವಾ ಸೋಲನ್ನು ಮೀರಿ ಕೆಲವು ಸ್ಥಾನಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಮೇಲೆ ಮೈತ್ರಿಕೂಟದಲ್ಲಿ ವಿರೋಧಗಳು ಇದ್ದರೂ, ಅಭ್ಯರ್ಥಿಗಳು ಅಂತಿಮಗೊಂಡ ನಂತರ ಇತ್ಯರ್ಥಪಡಿಸಿಕೊಳ್ಳಲಾಗಿತ್ತು.
ಎಲ್ಡಿಎಫ್ನ ಪ್ರಸ್ತುತ ಪರಿಸ್ಥಿತಿ ಅತ್ಯಂತ ಕಠಿಣವಾಗಿದ್ದು, ಮಂಜೇಶ್ವರ ಕ್ಷೇತ್ರಕ್ಕೆ ಸಿಪಿಎಂ ರಾಜ್ಯ ನಾಯಕತ್ವ ಸೂಚಿಸಿದ ಎರಡೂ ಹೆಸರುಗಳನ್ನು ಜಿಲ್ಲಾ ಸಮಿತಿ ತಿರಸ್ಕರಿಸಿದೆ. ಇದುವರೆಗೂ ಪಕ್ಷದಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಒಮ್ಮತ ಮೂಡಿಲ್ಲ.