ನವದೆಹಲಿ: ಭಾರತದಲ್ಲಿ ಬೈಕ್ ರೇಸಿಂಗ್ ಆಯೋಜಿಸುವ ಮೋಟೋಜಿಪಿ ಆಯೋಜಕರು ಶುಕ್ರವಾರ ಅಧಿಕೃತವಾಗಿ ದೃಢಪಡಿಸಿದ್ದಾರೆ. ಈ ಮೂಲಕ ಒಂಬತ್ತು ವರ್ಷಗಳ ನಂತರ 2023ರಲ್ಲಿ ಮೋಟೋಜಿಪಿ ಬೈಕ್ ರೇಸ್ ನಡೆಯುವುದು ಖಚಿತವಾಗಿದೆ.
ದೇಶದ 2011ರಿಂದ 2013ರವರೆಗೆ ಕಾರ್ ರೇಸಿಂಗ್ನ ಫಾರ್ಮುಲಾ1 ಆಯೋಜನೆ ಮಾಡಲಾಗಿತ್ತು. ಇದಾದ ನಂತರ ದೇಶದಲ್ಲಿ ಯಾವುದೇ ಮೋಟಾರ್‌ಸ್ಪೋರ್ಟ್ ಕಾರ್ಯಕ್ರಮ ನಡೆದಿರಲಿಲ್ಲ. ಇದೀಗ 2023ರಲ್ಲಿ ಭಾರತೀಯ ಗ್ರ್ಯಾಂಡ್ ಪ್ರಿಕ್ಸ್ ಅರ್ಥಾತ್ ಗ್ರ್ಯಾಂಡ್ ಪ್ರಿಕ್ ಆಫ್ ಭಾರತ್ (Grand Prix of Bharat) ಆಯೋಜಿಸುವುದಾಗಿ ಮೋಟೋಜಿಪಿ ಖಚಿತ ಪಡಿಸಿದೆ. ಬೈಕ್ ರೇಸ್ನ ನಿರ್ದಿಷ್ಟ ದಿನಾಂಕ ಪ್ರಕಟಿಸಿಲ್ಲ. ಆದರೆ, ಬೈಕ್ ರೇಸ್ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಏಳು ವರ್ಷಗಳ ಎಂಒಯುಗೆ ಸಹಿ: ಮೋಟೋಜಿಪಿಯ ವಾಣಿಜ್ಯ ಹಕ್ಕು ಹೊಂದಿರುವ ಡೋರ್ನಾ ಉನ್ನತ ಅಧಿಕಾರಿಗಳು ಈ ತಿಂಗಳ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಈ ಸಂದಭದಲ್ಲಿ ಭಾರತೀಯ ರೇಸ್ ಪ್ರವರ್ತಕರಾದ ಫೇರ್‌ಸ್ಟ್ರೀಟ್ ಸ್ಪೋರ್ಟ್ಸ್ (ಎಫ್‌ಎಸ್‌ಎಸ್) ಜೊತೆಗೆ ಏಳು ವರ್ಷಗಳ ಎಂಒಯುಗೆ ಸಹಿ ಹಾಕಿದ್ದರು. ಜೊತೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರೊಂದಿಗೆ ಸಭೆ ನಡೆಸಿದ್ದರು.
ಇದೇ ವೇಳೆ, ಎಫ್‌ಎಸ್‌ಎಸ್ ಮುಂದಿನ ವರ್ಷ ಮೋಟೋಜಿಪಿ ರೇಸ್ ನಡೆಯಲಿದೆ ಎಂದು ಘೋಷಿಸಿತ್ತು. ಆದರೆ, ಡೋರ್ನಾ ಎಂಡಿ ಕಾರ್ಲೋಸ್ ಎಜ್ಪೆಲೆಟಾ ಅವರು, ರೇಸ್ ನಡೆಸುವ ಬಗ್ಗೆ ನಿರ್ದಿಷ್ಟವಾದ ವರ್ಷವಾಗಲಿ, ಸಮಯವಾಗಿ ತಿಳಿಸಿರಲಿಲ್ಲ. ಈಗ 2023ರಲ್ಲಿ ಗ್ರ್ಯಾಂಡ್ ಪ್ರಿಕ್ ಆಫ್ ಭಾರತ್ ನಡೆಸುವುದಾಗಿ ಅವರೇ ಪ್ರಕಟಿಸಿದ್ದಾರೆ.
ಬುದ್ಧ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ರೇಸಿಂಗ್: ಭಾರತವು ಮೋಟಾರ್‌ಸೈಕಲ್ ಉದ್ಯಮಕ್ಕೆ ಪ್ರಮುಖ ಮಾರುಕಟ್ಟೆಯಾಗಿದೆ. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಸಮೀಪದ ಬುದ್ಧ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ರೇಸಿಂಗ್ ಮಾಡಲು ನಾವು ತುಂಬಾ ಎದುರು ನೋಡುತ್ತಿದ್ದೇವೆ. ಈ ಅದ್ಭುತ ಕ್ರೀಡೆ ನೋಡಲು ಅಭಿಮಾನಿಗಳನ್ನು ಸ್ವಾಗತಿಸಲು ಕಾಯುತ್ತಿದ್ದೇವೆ ಎಂದು ಕಾರ್ಲೋಸ್ ಎಜ್ಪೆಲೆಟಾ ತಿಳಿಸಿದ್ದಾರೆ. ಮೋಟೋಜಿಪಿ ರೇಸ್ ದೇಶಕ್ಕೆ ಒಂದು ಹೆಗ್ಗುರುತಿನ ಕ್ಷಣವಾಗಲಿದೆ. ಅದರಲ್ಲಿ ನಾವು ಭಾಗಹಿಸುತ್ತಿರುವುದಕ್ಕಾಗಿ ಸಂತೋಷ ಪಡುತ್ತೇವೆ ಎಂದು ಎಫ್‌ಎಸ್‌ಎಸ್ ಸಿಒಒ ಪುಷ್ಕರ್ ನಾಥ್ ಹೇಳಿದ್ದಾರೆ.
ಮೋಟೋಜಿಪಿ ತನ್ನ ಪ್ರಕಟಣೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ಪ್ರಕಟಿಸಿದೆ. ಮೋಟೋಜಿಪಿ ರೇಸ್ನಂತಹ ಜಾಗತಿಕ ಕಾರ್ಯಕ್ರಮವನ್ನು ಆಯೋಜಿಸಲು ಉತ್ತರ ಪ್ರದೇಶಕ್ಕೆ ಇದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಮೋಟೋಜಿಪಿ ಭಾರತ್‌ಗೆ ನಮ್ಮ ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
5000 ಜನರಿಗೆ ಕೆಲಸ ನಿರೀಕ್ಷೆ: ಮೋಟೋಜಿಪಿ ರೇಸ್ ಸಮಯದಲ್ಲಿ ಸವಾರರು ಮತ್ತು ಸಿಬ್ಬಂದಿ ಸೇರಿದಂತೆ ಸುಮಾರು 5000 ಜನರು ಕೆಲಸ ಮಾಡುತ್ತಾರೆ. ಭಾರತದಲ್ಲಿ ಆಯೋಜನೆಯಿಂದಲೂ 5000 ಜನರಿಗೆ ಕೆಲಸ ಸಿಗುವ ನಿರೀಕ್ಷೆ ಇದೆ. ಈ ತಿಂಗಳ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಡೋರ್ನಾ ಎಂಡಿ ಕಾರ್ಲೋಸ್ ಎಜ್ಪೆಲೆಟಾ, ಮೋಟೋಜಿಪಿ ರೇಸ್ ವಾರಾಂತ್ಯದಲ್ಲಿ 100 ಮಿಲಿಯನ್ ಯೂರೋಗಳ ಆರ್ಥಿಕ ಚಟುವಟಿಕೆ ಉತ್ಪಾದಿಸುತ್ತದೆ ಎಂದು ಹೇಳಿದ್ದರು.
ಇದನ್ನೂ ಓದಿ: ಭಾರತದಲ್ಲಿ 5G ಸೇವೆ ಆರಂಭ: ಅ.1 ರಂದು ಚಾಲನೆ ನೀಡಲಿರುವ ಪ್ರಧಾನಿ ಮೋದಿ