ಹಜಾರಿಬಾಗ್ (ಜಾರ್ಖಂಡ್): ಬಂಧಿತ ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕನ ಬಗ್ಗೆ ಮಾಹಿತಿ ಪಡೆದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಹಜಾರಿಬಾಗ್ ಜಿಲ್ಲೆಯ ಭಂಡಾರಾ ಪಾರ್ಕ್‌ನಲ್ಲಿರುವ ಹೋಟೆಲ್ ಮೇಲೆರ ದಾಳಿ ನಡೆಸಿದೆ. ಆದಾಗ್ಯೂ, ಐಟಿ ತಂಡ ಬರುವ ಗಂಟೆಗಳ ಮೊದಲು ವ್ಯಕ್ತಿ ಹೋಟೆಲ್‌ನಿಂದ ಹೊರಟು ಹೋಗಿದ್ದಾರೆ ಎಂದು ವರದಿಯಾಗಿದೆ.
ಶಿಕ್ಷಕರ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಜಾರಿಬಾಗ್‌ನಲ್ಲಿ ಮೊಕ್ಕಾಂ ಹೂಡಿರುವ ಐಟಿ ತಂಡ ಕೋಲ್ಕತ್ತಾದ ಜಾರಿ ನಿರ್ದೇಶನಾಲಯದಿಂದ ಮಾಹಿತಿ ಪಡೆದಿದೆ. ಆ ವ್ಯಕ್ತಿ ಅಕ್ರಮ ಹಣ ಬಚ್ಚಿಡಲು ಭಂಡಾರಾ ಪಾರ್ಕ್‌ನಲ್ಲಿದ್ದಾನೆ ಎಂದು ಅವರು ಹೇಳಿದರು. ಆದಾಯ ತೆರಿಗೆ ಇಲಾಖೆ ಸಿಬ್ಬಂದಿ ನಂತರ ಮಲ್ಟಿಪ್ಲೆಕ್ಸ್, ಹೋಟೆಲ್ ಮತ್ತು ಮದುವೆ ಮಂಟಪ ಒಳಗೊಂಡಿರುವ ಪಾರ್ಕ್‌ನ ಎಲ್ಲ ಬಾಗಿಲುಗಳನ್ನು ಮುಚ್ಚಿದರು.
ಶಿಕ್ಷಕರ ನೇಮಕಾತಿ ಹಗರಣ ಪ್ರಕರಣ ಸಂಬಂಧ ಇಡಿ ಇತ್ತೀಚೆಗೆ ಕೋಲ್ಕತ್ತಾದಲ್ಲಿ ಬಂಧಿಸಲ್ಪಟ್ಟ ಮಾಜಿ ಸಚಿವ ಚಟರ್ಜಿ ಅವರಿಗೆ ಈ ವ್ಯಕ್ತಿ ಆಪ್ತ ಎಂದು ಪರಿಗಣಿಸಲಾಗಿದೆ. ಹೆಸರು ಬಹಿರಂಗಪಡಿಸಲು ಇಚ್ಛಿಸದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಹೋಟೆಲ್‌ನಲ್ಲಿ ಸುಮಾರು 8 ಗಂಟೆಗಳ ಕಾಲ ಶೋಧ ನಡೆಸಿದರು. ಆದರೆ, ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ ಎಂದು ವರದಿಯಾಗಿದೆ.
ಹೋಟೆಲ್ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಿದ ಐಟಿ ಅಧಿಕಾರಿಗಳು, ಕೋಲ್ಕತ್ತಾದಿಂದ ಸರ್ಕಾರಿ ವಾಹನದಲ್ಲಿ ಬಂದ ಆರೋಪಿ ದೊಡ್ಡ ಬ್ಯಾಗ್ ಅನ್ನು ತಮ್ಮೊಂದಿಗೆ ಸಾಗಿಸುತ್ತಿದ್ದರು ಎಂಬ ಮಾಹಿತಿ ಅಧಿಕಾರಿಗಳಿಗೆ ಗೊತ್ತಾಗಿದೆಯಂತೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿಕ್ಷಕರ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕಳೆದ ತಿಂಗಳು ಪಶ್ಚಿಮ ಬಂಗಾಳದ ಸಚಿವ, ತೃಣಮೂಲ ಕಾಂಗ್ರೆಸ್ ನಾಯಕ ಚಟರ್ಜಿ ಪಾರ್ಥ ಚಟರ್ಜಿ ಅವರನ್ನು ಬಂಧಿಸಿತ್ತು. ಶಿಕ್ಷಕರ ನೇಮಕಾತಿ ಹಗರಣ ನಡೆದಾಗ ಪಾರ್ಥ ಚಟರ್ಜಿ ರಾಜ್ಯದ ಶಿಕ್ಷಣ ಸಚಿವರಾಗಿದ್ದರು. ಈ ಪ್ರಕರಣದಲ್ಲಿ ಭಾಗಿಯಾದ ಶಂಕಿತರ ವಿರುದ್ಧ ಅಕ್ರಮ ಹಣ ಸಾಗಣೆಯ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: WB SSC scam.. ನೇಮಕಾತಿ ಹಗರಣ, ಸಚಿವ ಪಾರ್ಥ ಚಟರ್ಜಿ ಬಂಧನ