ಮುಂಬೈ: ಇಂಡೋ-ಚೀನಾ ಗಡಿಯಲ್ಲಿನ ಇಂದಿನ ಪರಿಸ್ಥಿತಿಗೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರೇ ಕಾರಣ ಎಂದು ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಆರೋಪಿಸಿದರು. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಶಿಮ್ಲಾ ಒಪ್ಪಂದದ ನಂತರ ತವಾಂಗ್ ಸೇರಿದಂತೆ ಇಡೀ ಅರುಣಾಚಲ ಪ್ರದೇಶವನ್ನು ಭಾರತದ ಭೂಪ್ರದೇಶವನ್ನಾಗಿ ಮಾಡಲಾಗಿದೆ ಎಂದರು.
ಆಗಿನ ಪ್ರಧಾನಿ ನೆಹರು ಅವರು ಸಮಯೋಚಿತ ನಿರ್ಧಾರ ಕೈಗೊಳ್ಳದ ಕಾರಣ ಗಡಿಯಲ್ಲಿ ಪರಿಸ್ಥಿತಿ ಹದಗೆಡುತ್ತಲೇ ಇತ್ತು. ಈಗಿನ ಸರ್ಕಾರ ತಪ್ಪುಗಳನ್ನು ತಿದ್ದುವ ಕೆಲಸ ಮಾಡುತ್ತಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶವು ತನ್ನ ಅಪ್ರತಿಮ ವೀರರಿಗೆ ಮನ್ನಣೆ ನೀಡುತ್ತಿದೆ ಮತ್ತು ಪಠ್ಯಕ್ರಮದಲ್ಲಿ ಅವರಿಗೆ ಸ್ಥಾನ ನೀಡುತ್ತಿದೆ ಎಂದು ಹೇಳಿದರು.
2014ರ ಮೊದಲು ಗೃಹ ಸಚಿವರು ಈಶಾನ್ಯ ರಾಜ್ಯಗಳಿಗೆ ಸಾಂದರ್ಭಿಕವಾಗಿ ಭೇಟಿ ನೀಡುತ್ತಿದ್ದರು. ಅದು ಗುವಾಹಟಿಗೆ ಮಾತ್ರ ಸೀಮಿತವಾಗುತ್ತಿತ್ತು. ಇಂದು ಪ್ರತಿ 15 ದಿನಕ್ಕೊಮ್ಮೆ ಒಬ್ಬರಲ್ಲೊಬ್ಬರು ಕೇಂದ್ರ ಸಚಿವರು ತಮ್ಮ ಇಲಾಖೆಯಡಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸುವುದಲ್ಲದೇ ಕಾಮಗಾರಿ ಸರಿಯಾಗಿ ನಡೆಯುವಂತೆಯೂ ನೋಡಿಕೊಳ್ಳುತ್ತಾರೆ. ಪ್ರತ್ಯೇಕತಾವಾದ, ಭ್ರಷ್ಟಾಚಾರ ಮತ್ತು ಮಾದಕ ದ್ರವ್ಯಗಳ ಹಾವಳಿಯಿಂದ ಈಗ ಈಶಾನ್ಯದ ಗುರುತು ಸಂಪೂರ್ಣವಾಗಿ ಬದಲಾಗಿದೆ ಮತ್ತು ಹೂಡಿಕೆಯ ವಾತಾವರಣ ಉಂಟಾಗಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದರು.
ಇದನ್ನೂ ಓದಿ: ಇದು 1962 ಅಲ್ಲ.. ಚೀನಾಗೆ ಅರುಣಾಚಲಪ್ರದೇಶ ಸಿಎಂ ಪೆಮಾ ಖಂಡು ಖಡಕ್ ವಾರ್ನಿಂಗ್