ನವದೆಹಲಿ: 2002 ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ಮಾಡಿ, ಅವರ ಕುಟುಂಬಸ್ಥರನ್ನು ಹತ್ಯೆ ಮಾಡಿದ ಅಪರಾಧಿಗಳು ಜೈಲಿನಿಂದ ಅವಧಿಪೂರ್ವ ಹೊರಬಂದ ಅರ್ಜಿ ವಿಚಾರಣೆ ಮುಂದುವರಿದಿದ್ದು, 'ಅಪರಾಧ ಮಾಡಿ ಜೈಲು ಶಿಕ್ಷೆಯಿಂದ ಹೊರಬರುವ ಹಕ್ಕು, ಮೂಲಭೂತ ಹಕ್ಕಾಗಲಿದೆಯೇ' ಎಂದು ಸುಪ್ರೀಂಕೋರ್ಟ್ ಮತ್ತೆ ಪ್ರಶ್ನಿಸಿದೆ.
ನ್ಯಾಯಮೂರ್ತಿಗಳಾದ ಬಿ. ವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು, ಸಂವಿಧಾನದ 32ನೇ ವಿಧಿಯ ಪ್ರಕಾರ, ಅಪರಾಧ ಮಾಡಿ ಬಳಿಕ ಅವರು ಮೂಲಭೂತ ಹಕ್ಕುಗಳ ಅಡಿಯಲ್ಲಿ ಶಿಕ್ಷೆಯಿಂದ ವಿನಾಯಿತಿ ಕೋರಬಹುದೇ ಎಂದು ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ಪರವಾಗಿ ವಾದ ಮಂಡಿಸುತ್ತಿರುವ ವಕೀಲರಿಗೆ ಈ ಪ್ರಶ್ನೆ ಕೇಳಿತು. ಅಪರಾಧಿಗಳು ಜೈಲಿನಿಂದ ಬಿಡುಗಡೆಯಾದ ನಂತರ ಒಂದು ವರ್ಷಕ್ಕೂ ಹೆಚ್ಚು ಕಾಲ ಹೊರಗಿದ್ದಾರೆ. ಅವರ ಸ್ವಾತಂತ್ರ್ಯವನ್ನು ಮತ್ತೆ ಕಸಿದುಕೊಳ್ಳಬೇಡಿ ಎಂದು ಪೀಠದ ಮುಂದೆ ವಾದ ಮಂಡಿಸಲಾಗಿದೆ.
32ನೇ ವಿಧಿಯ ಪ್ರಕಾರ ಸುಪ್ರೀಂಕೋರ್ಟ್, 226 ನೇ ವಿಧಿಯ ಪ್ರಕಾರ ಹೈಕೋರ್ಟ್ಗಳಲ್ಲಿ ಪರಿಹಾರ ಕೋರಿ ಶಿಕ್ಷೆಗೊಳಗಾದವರು ಅರ್ಜಿ ಸಲ್ಲಿಸಬಹುದು ಎಂದು ಅಪರಾಧಿಗಳ ಪರ ವಕೀಲರು ವಾದಿಸಿದಾಗ, ಶಿಕ್ಷೆಯಿಂದ ವಿಮೋಚನೆ ಪಡೆಯುವ ಹಕ್ಕು ಮೂಲಭೂತ ಹಕ್ಕಿನಡಿ ಬರುತ್ತದೆಯೇ ಎಂದು ಪೀಠ ಪ್ರಶ್ನಿಸಿತು.
ಬಿಲ್ಕಿಸ್ ಬಾನು ಪ್ರಕರಣದಲ್ಲಿ ಗುಜರಾತ್ ಸರ್ಕಾರ ಅಪರಾಧಿಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿಲ್ಲ. ಆದ್ದರಿಂದ ಶಿಕ್ಷಿತರನ್ನು ಅವಧಿಪೂರ್ವ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಜೈಲಿನಿಂದ ಬಿಡುಗಡೆಯಾದ ನಂತರ ವ್ಯಕ್ತಿಗಳ ಸ್ವಾತಂತ್ರ್ಯವನ್ನು ಪ್ರಶ್ನಿಸುವಂತಿಲ್ಲ. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರು ಈಗ ನನ್ನ ಕಕ್ಷಿದಾರರ ಮೂಲಭೂತ ಹಕ್ಕಾದ ಸ್ವಾತಂತ್ರ್ಯವನ್ನೇ ಮೊಟಕುಗೊಳಿಸಲು ಪ್ರಯತ್ನಿಸುತ್ತಿದ್ದಾರೆ. 32 ನೇ ವಿಧಿಯ ಪ್ರಕಾರ ಹೀಗೆ ಮಾಡುವಂತಿಲ್ಲ ಎಂದು ವಕೀಲರು ವಾದಿಸಿದರು. ವಾದ- ಪ್ರತಿವಾದದ ಬಳಿಕ ಪ್ರಕರಣದ ವಿಚಾರಣೆಯನ್ನು ಕೋರ್ಟ್, ಅಕ್ಟೋಬರ್ 4 ಕ್ಕೆ ಮುಂದೂಡಿತು.
ಕಳೆದ ಸಲದ ವಾದವೇನು?: ಕಳೆದ ಸಲದ ವಿಚಾರಣೆಯಲ್ಲಿ ಅತ್ಯಾಚಾರ, ಹತ್ಯೆ ಮಾಡಿದ ಅಪರಾಧಿಗಳು ಜೈಲಿನಿಂದ ಶಿಕ್ಷೆ ಅವಧಿಗೂ ಮೊದಲೇ ಬಿಡುಗಡೆ ಹೊಂದಲು ಮತ್ತು ಇನ್ನಿತರರು ದೀರ್ಘಾವಧಿ ಪೆರೋಲ್ ಪಡೆಯಲು ಹೇಗೆ ಅರ್ಹರು ಎಂದು ಪ್ರಶ್ನಿಸಿತ್ತು. ಪ್ರಕರಣದ ಅಪರಾಧಿಗಳ ಪರ ವಾದ ಮಂಡಿಸುತ್ತಿರುವ ವಕೀಲರ ಮೇಲೆ ಗುರುವಾರ ಪ್ರಶ್ನೆಗಳ ಸುರಿಮಳೆಯನ್ನೆ ಹರಿಸಿತ್ತು.
ಶಿಕ್ಷೆಗೆ ಒಳಗಾದವರು ಎಂಬ ಕಾರಣಕ್ಕಾಗಿ ಅವರಿಗಿರುವ ಯಾವುದೇ ವಿನಾಯಿತಿಯ ಪ್ರಯೋಜನವನ್ನು ನಿರಾಕರಿಸುವಂತಿಲ್ಲ ಎಂದು ವಕೀಲರು ವಾದಿಸಿದಾಗ, ಹೆಣ್ಣು ಮಗಳನ್ನು ರೇಪ್ ಮಾಡಿ ಆಕೆಯ ಕುಟುಂಬವನ್ನು ಬಲಿ ಪಡೆದ ಪಾತಕಿಗಳು ಕ್ಷಮಾದಾನಕ್ಕೆ ಹೇಗೆ ಅರ್ಹರು ಮತ್ತು ಅವರು ಪೆರೋಲ್ ಮೇಲೆ ಹೇಗೆ ಹೊರಬರಲು ಅವಕಾಶ ನೀಡಬೇಕು ಎಂಬುದನ್ನು ತಿಳಿಸುವಂತೆ ಸೂಚಿಸಿತ್ತು.
ಅಪರಾಧದ ಸ್ವರೂಪ ಮತ್ತು ಪ್ರಕರಣದಲ್ಲಿನ ಸಾಕ್ಷ್ಯಗಳ ಆಧಾರದ ಮೇಲೆ ಘೋರ ಅಪರಾಧ ಮಾಡಿರುವವರಿಗೆ ಶೀಘ್ರ ಬಿಡುಗಡೆಗೆ ಪರಿಗಣಿಸುವ ಅಂಶಗಳಲ್ಲ ಎಂದು ಹೇಳಿದ ಪೀಠ, ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳು ಜೈಲಿನಿಂದ ಅಕಾಲಿಕ ಬಿಡುಗಡೆಗೆ ಸಂಬಂಧಿಸಿದಂತೆ ಯಾವುದಾದರೂ ವಿಶೇಷ ಅರ್ಹತೆ ಹೊಂದಿದ್ದಾರೆಯೇ ಎಂದು ಕೇಳಿತ್ತು.
ಇದನ್ನೂ ಓದಿ: ಘೋರ ಕೃತ್ಯ ಮಾಡಿದ ಅಪರಾಧಿಗಳು ಬಿಡುಗಡೆಗೆ ಹೇಗೆ ಅರ್ಹರು?: ಬಿಲ್ಕಿಸ್ ಬಾನೊ ಕೇಸಲ್ಲಿ ಸುಪ್ರೀಂಕೋರ್ಟ್ ಪ್ರಶ್ನೆ