ನವದೆಹಲಿ: ಆಹಾರ ಕೊರತೆ ನೀಗಿಸಲು ಮತ್ತು ಹಣದುಬ್ಬರವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಈಗಾಗಲೇ ಗೋಧಿ ಮತ್ತು ಸಕ್ಕರೆಯ ರಫ್ತಿನ ಮೇಲೆ ನಿರ್ಬಂಧ ಹೇರಿದೆ. ಇದೀಗ ಅಕ್ಕಿಯ ರಫ್ತಿನ ಮೇಲೂ ನಿಯಂತ್ರಣ ಹೇರುವ ಸಾಧ್ಯತೆ ಇದೆ.
ಭಾರತ ಗೋಧಿ ಮತ್ತು ಸಕ್ಕರೆಯ ರಫ್ತಿನ ಮೇಲೆ ನಿರ್ಬಂಧ ಹೇರಿದ ಬಳಿಕ ಜಾಗತಿಕ ಮಾರುಕಟ್ಟೆಗಳಲ್ಲಿ ತಲ್ಲಣ ಶುರುವಾಗಿದೆ. ಇದಲ್ಲದೇ, ನಂ.1 ಅಕ್ಕಿ ರಫ್ತುದಾರ ದೇಶವಾಗಿರುವ ಭಾರತ ಮುಂದಿನ ದಿನಗಳಲ್ಲಿ ಅಕ್ಕಿ ರಫ್ತಿನ ಮೇಲೂ ನಿರ್ಬಂಧ ವಿಧಿಸಲು ಚಿಂತನೆ ನಡೆಸುತ್ತಿದೆ. ಈ ನಿಯಮ ಜಾರಿಯಾದಲ್ಲಿ ಜಾಗತಿಕ ಮಾರುಕಟ್ಟೆ ಇನ್ನಷ್ಟು ಕಂಗೆಡುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರವು ಈಗಾಗಲೇ ಗೋಧಿ ರಫ್ತಿನ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಅಕ್ಕಿ ರಫ್ತಿನ ಮೇಲೂ ನಿರ್ಬಂಧಗಳನ್ನು ಪರಿಗಣಿಸುವ ಸಮಯ ಬಂದಿದೆ ಎಂದು ಅರ್ಥಶಾಸ್ತ್ರಜ್ಞರಾದ ರಾಧಿಕಾ ಪಿಪ್ಲಾನಿ ಹೇಳಿದ್ದಾರೆ. ಈ ನಿರ್ಧಾರ ದೇಶದಲ್ಲಿ ಆಹಾರದ ಬೆಲೆಗಳನ್ನು ಕಡಿಮೆ ಮಾಡುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ ಎಂದು ಹೇಳಿದ್ದಾರೆ.
2008 ರಲ್ಲಿ ಉಲ್ಬಣಿಸಿದ ಆಹಾರ ಬಿಕ್ಕಟ್ಟಿನ ವೇಳೆ ವಿಯೆಟ್ನಾಂ ಅಕ್ಕಿ ಸಾಗಣೆಯನ್ನು ನಿರ್ಬಂಧಿಸಿತ್ತು. ಭಾರತ ಕೂಡ ಇದೇ ನಡೆಯನ್ನು ಅನುಸರಿಸಬಹುದು. ಏಷ್ಯಾವು ಸುಮಾರು ಶೇ.90 ಅಕ್ಕಿಯನ್ನು ಉತ್ಪಾದಿಸುತ್ತದೆ ಮತ್ತು ಬಳಸುತ್ತದೆ. ಜಾಗತಿಕ ವ್ಯಾಪಾರದಲ್ಲಿ ಅಕ್ಕಿ ರಫ್ತಿನಲ್ಲಿ ಶೇ.40ರಷ್ಟು ಭಾರತವೇ ಪಾಲು ಹೊಂದಿದೆ.
ದೇಶದಲ್ಲಿ ಅಕ್ಕಿಯ ಪೂರೈಕೆ ಜಾಸ್ತಿಯಾಗಿದೆ. ರಫ್ತು ನಿಷೇಧಿಸುವ ಅಥವಾ ನಿರ್ಬಂಧಿಸುವ ಅಗತ್ಯವಿಲ್ಲ. ಸರ್ಕಾರ ಹಣದುಬ್ಬರ ನಿಯಂತ್ರಣಕ್ಕೆ ಇನ್ನೂ ಪರಿಮಾಣಾತ್ಮಕ ನಿರ್ಬಂಧವನ್ನು ವಿಧಿಸಲು ಬಯಸಿದಲ್ಲಿ ಈ ನಿರ್ಬಂಧ ಜಾರಿಯಾಗಬಹುದು. ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಈ ನಿರ್ಧಾರವನ್ನು ಸ್ವಾಗತಿಸಬಹುದು ಎಂದು ಅಕ್ಕಿ ರಫ್ತುದಾರರ ಸಂಘದ ಅಧ್ಯಕ್ಷ ಬಿ.ವಿ. ಕೃಷ್ಣರಾವ್ ಹೇಳಿದರು.
ಅಕ್ಕಿಯ ರಫ್ತಿನಲ್ಲಿ 2 ವಿಧವಿದ್ದು, ಬಾಸ್ಮತಿ ಮತ್ತು ಬಾಸ್ಮತಿಯಲ್ಲದ ಅಕ್ಕಿ. ಬಾಸ್ಮತಿ ದೀರ್ಘ ಶೇಖರಿತ ಧಾನ್ಯವಾಗಿದ್ದು, ಅದರ ವಿಶಿಷ್ಟ ಪರಿಮಳಕ್ಕೆ ಹೆಸರುವಾಸಿಯಾಗಿದೆ. 2021- 22ರಲ್ಲಿ ಒಟ್ಟು 3.95 ಮಿಲಿಯನ್ ಟನ್ ಬಾಸ್ಮತಿ ಅಕ್ಕಿ ರಫ್ತು ಮಾಡಲಾಗಿದ್ದರೆ, ಬಾಸ್ಮತಿ ಅಲ್ಲದ ಸಾಗಣೆಗಳು 17.26 ಮಿಲಿಯನ್ ಟನ್‌ಗಳಾಗಿವೆ.
ಓದಿ: ಉಗ್ರ ಯಾಸಿನ್ ಮಲಿಕ್ಗೆ ಜೀವಾವಧಿ ಶಿಕ್ಷೆ: ಶ್ರೀನಗರ ಭಾಗಶಃ ಸ್ತಬ್ಧ