ರುದ್ರಪ್ರಯಾಗ( ಉತ್ತರಾಖಂಡ್): ಪವಿತ್ರ ಕೇದಾರನಾಥ ದೇಗುಲಕ್ಕೆ ತನ್ನ ಸಾಕು ನಾಯಿಯನ್ನು ಕರೆದುಕೊಂಡು ಹೋದ ನೋಯ್ಡಾ ನಿವಾಸಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಯೂಟ್ಯೂಬ್ ಬ್ಲಾಗರ್ ಎನ್ನಲಾಗಿರುವ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು.
ಚಾರ್ ಧಾಮ್ ಯಾತ್ರೆಯ ಸಮಯದಲ್ಲಿ ವ್ಯಕ್ತಿಯು ತನ್ನ ಸೈಬೀರಿಯನ್ ನಾಯಿಯನ್ನ ಪವಿತ್ರ ದೇಗುಲಕ್ಕೆ ಕರೆದೊಯ್ದಿದ್ದಾನೆ. ಅಲ್ಲದೆ ವಿಡಿಯೋ ಕೂಡ ಮಾಡಿದ್ದಾನೆ. ವಿಡಿಯೋದಲ್ಲಿ, ಆತ ನಾಯಿಯ ಮುಂಭಾಗದ ಪಂಜಗಳನ್ನು ಹಿಡಿದು ಕೇದಾರನಾಥ ದೇವಾಲಯದ ಹೊರ ಆವರಣದಲ್ಲಿರುವ 'ನಂದಿ'ಯ ಪ್ರತಿಮೆಯನ್ನು ಸ್ಪರ್ಶಿಸುವಂತೆ ಕಾಣಿಸುತ್ತದೆ.
ತ್ಯಾಗಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿಯು ಆತನ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ ಎಂದು ಮೂಲಗಳು ಹೇಳಿವೆ. ಈ ದೃಶ್ಯಗಳು ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ, ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿಯ ಅಧ್ಯಕ್ಷ ಅಜೇಂದ್ರ ಅಜಯ್ ಅವರ ಆದೇಶದ ಮೇರೆಗೆ ಸಿಇಒ ಸಲ್ಲಿಸಿದ ದೂರಿನ ಆಧಾರದ ಮೇಲೆ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಕೂಡಲೇ ಬ್ಲಾಗರ್ ಅನ್ನು ಗುರುತಿಸಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ತನಿಖೆ ಮುಂದುವರೆದಿದೆ.