ಛತ್ತೀಸ್ಗಢ : ಕೈಯಲ್ಲಿ ಬಿಲ್ಲು, ಬೆರಳತುದಿಯಲ್ಲೇ ಬಾಣ.. ಕಣ್ಣಲ್ಲಿ ಗುರಿ ಮುಟ್ಟುವ ತವಕ.. ಹೀಗೆ ಅರ್ಜುನನಂತೆ ಬಾಣ ಪ್ರಯೋಗಕ್ಕೆ ಸಜ್ಜಾಗಿ ನಿಂತ ಮಕ್ಕಳು. ಛತ್ತೀಸ್ಗಢದ ನಕ್ಸಲ್ ಪೀಡಿತ ಪ್ರದೇಶ ಮಾಡ್‌ನಲ್ಲಿ ಈ ದೃಶ್ಯ ಸಾಮಾನ್ಯ.
ಕೊಂಡಗಾಂವ್ ಜಿಲ್ಲೆಯ ಮಾಡ್ ಪ್ರದೇಶದಲ್ಲಿ ಐಟಿಬಿಪಿ ಜವಾನರ ಸಹಾಯದಿಂದ ಇಲ್ಲಿನ ಮಕ್ಕಳು ಬಿಲ್ಲುಗಾರಿಕೆ ಅಭ್ಯಾಸ ಮಾಡುತ್ತಿದ್ದಾರೆ. ಐಟಿಬಿಪಿ 41ನೇ ಬೆಟಾಲಿಯನ್‌ನ ಕಮಾಂಡೆಂಟ್ ಸುರೇಂದರ್ ಖತ್ರಿ ಅವರ ಮಾರ್ಗದರ್ಶನದಲ್ಲಿ 2016ರಲ್ಲಿ ಬಿಲ್ಲುಗಾರಿಕೆ ತರಬೇತಿ ಪ್ರಾರಂಭಿಸಲಾಯಿತು. ಜವಾನ್ ತ್ರಿಲೋಚನ್ ಮೊಹಂತೊ ಅವರೇ ಈ ಮಕ್ಕಳಿಗೆ ತರಬೇತಿ ನೀಡುತ್ತಿರುವ ಯೋಧ.
ಇಲ್ಲಿನ ಮಕ್ಕಳು ಓಪನ್ ಜೂನಿಯರ್ ರಾಜ್ಯ ಮಟ್ಟದ ಪಂದ್ಯಾವಳಿ ಸೇರಿ ರಾಷ್ಟ್ರಮಟ್ಟದ ಆರ್ಚರ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಆರಂಭಿಕ ದಿನಗಳಲ್ಲಿ, ಮಕ್ಕಳಿಗೆ ಬಿಲ್ಲುಗಾರಿಕೆ ತರಬೇತಿ ನೀಡುವುದು ಐಟಿಬಿಪಿ ಜವಾನರಿಗೆ ಸವಾಲಾಗಿತ್ತು. ಬಿಲ್ಲುಗಾರಿಕೆಗೆ ಬಳಸುವ ವಸ್ತುಗಳನ್ನು ವಿದೇಶದಿಂದ ಪಡೆಯಲಾಗುತ್ತದೆ. ಅವು ತುಂಬಾ ದುಬಾರಿ. ಐಟಿಬಿಪಿ ಜವಾನರು ಅದನ್ನು ತಮ್ಮ ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ನೀಡಿದ್ದಾರೆ.
ಈಗ ಈ ಬುಡಕಟ್ಟು ಪ್ರದೇಶದ ಮಕ್ಕಳು ಬಿಲ್ಲುಗಾರಿಕೆಯಲ್ಲಿ ಪರಿಣಿತಿ ಹೊಂದಿದ್ದಾರೆ. ಪ್ರತಿಯೊಬ್ಬರ ಜೀವನದ ಗುರಿ ಈಗ ಬದಲಾಗಿದೆ. ದೇಶದ ಗಡಿ ಕಾಯುವ ಕಾಯಕದ ಜತೆ ಬುಡಕಟ್ಟು ಜನರ ಬದುಕಿಗೆ ದಾರಿದೀಪವಾದ ಜವಾನರಿಗೊಂದು ಸೆಲ್ಯೂಟ್ ಹೇಳಿ ಬಿಡೋಣ..