ಪಾಟ್ನಾ: ಇಂಡಿಗೋ ಏರ್‌ಲೈನ್ಸ್ ವ್ಯವಸ್ಥಾಪಕ ರೂಪೇಶ್ ಕುಮಾರ್ ಸಿಂಗ್ ಅವರ ಹತ್ಯೆ ಬಿಹಾರದಲ್ಲಿ ಸಂಚಲನ ಉಂಟು ಮಾಡಿದೆ. ಈ ಪ್ರಕರಣ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಮತ್ತೊಮ್ಮೆ ಪ್ರಶ್ನೆ ಮಾಡುವಂತೆ ಮಾಡಿದೆ. ಈ ಘಟನೆಯು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದ್ದಲ್ಲದೇ, ರಾಜಕೀಯ ಕೆಸರೆರಚಾಟಕ್ಕೂ ವೇದಿಕೆ ಕಲ್ಪಿಸಿದೆ.
ರೂಪೇಶ್ ಕುಮಾರ್ ಸಿಂಗ್ (40) ಅವರು ಮಂಗಳವಾರ ಸಂಜೆ ಕಚೇರಿಯಿಂದ ಹಿಂದಿರುಗಿದ ನಂತರ ನಗರದ ಪುಣೈಚಕ್ ಪ್ರದೇಶದಲ್ಲಿರುವ ತಮ್ಮ ನಿವಾಸದ ಮುಂದೆ ನಿಂತು ಬಾಗಿಲು ತೆರೆಯಲು ಕಾಯುತ್ತಿದ್ದಾಗ ಅವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ಈ ವೇಳೆ ಸಿಂಗ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಅಲ್ಲಿಯೇ ಸಾವನ್ನಪ್ಪಿದ್ದರು.
ಇವರು ಪತ್ನಿ ಮತ್ತು 10 ವರ್ಷದೊಳಗಿನ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸಿಂಗ್ ಉದ್ಯೋಗ ವಿವರಗಳ ಪ್ರಕಾರ, ಅವರು ರಾಜ್ಯದ ಅನೇಕ ಪ್ರಬಲ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಹತ್ತಿರವಾಗಿದ್ದರು ಎಂಬ ಮಾಹಿತಿ ದೊರೆತಿದೆ.
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಇಬ್ಬರು ಹಲ್ಲೆಕೋರರು ಗುಂಡುಹಾರಿಸಿ ಆ ನಂತರ ಮೋಟಾರ್ ಸೈಕಲ್ ಏರಿ ಪರಾರಿಯಾಗಿರುವುದು ಸರೆಯಾಗಿದೆ. ಅಪರಾಧಿಗಳು ಹಲ್ಲೆಯಲ್ಲಿ 7.65 ಎಂಎಂ ಗ್ರಾಮೀಣ ಪಿಸ್ತೂಲ್ ಬಳಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಈ ಹತ್ಯೆಯಾದ ಮೂರು ದಿನಗಳ ನಂತರವೂ ಪಾಟ್ನಾ ಪೊಲೀಸರು ಇನ್ನೂ ಯಾವುದೇ ಆರೋಪಿಯನ್ನು ಬಂಧಿಸಿಲ್ಲ. ಹೀಗಾಗಿ ಈ ಪ್ರಕರಣವನ್ನು ಭೇದಿಸಲು ಮತ್ತು ಆರೋಪಿಗಳನ್ನು ಶೀಘ್ರ ಬಂಧಿಸಲು ಪಾಟ್ನಾ ಡಿಎಸ್ಪಿ ಮತ್ತು ಎಸ್‌ಪಿ ಒಳಗೊಂಡ ವಿಶೇಷ ತನಿಖಾ ತಂಡವನ್ನು(ಎಸ್‌ಐಟಿ) ರಚಿಸಲಾಗಿದೆ.
ಇದೇ ವೇಳೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸುವುದಾಗಿ ಹೇಳಿ ನ್ಯಾಯದ ಭರವಸೆ ಕೊಟ್ಟಿದ್ದಾರೆ.