ಸೋನಿಪತ್(ಹರಿಯಾಣ): ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಅದ್ಭುತ ಪ್ರದರ್ಶನ ನೀಡುವ ಮೂಲಕ ಸೆಮಿಫೈನಲ್ಗೆ ಲಗ್ಗೆ ಹಾಕಿದ್ದು, ಇಂದಿನ ಪಂದ್ಯದಲ್ಲಿ ವಿಶ್ವದ ನಂಬರ್ 2 ತಂಡ ಆಸ್ಟ್ರೇಲಿಯಾ ವಿರುದ್ಧ 1-0 ಗೋಲುಗಳ ಅಂತರದಿಂದ ಜಯ ಸಾಧಿಸಿದೆ. ತಂಡದ ಗೆಲುವಿಗೆ ಎಲ್ಲೆಡೆಯಿಂದ ಮೆಚ್ಚುಗೆ ಕೇಳಿ ಬರುತ್ತಿದ್ದು, ಇದೇ ವಿಷಯವಾಗಿ ಭಾರತ ಮಹಿಳಾ ಹಾಕಿ ತಂಡದ ಮಾಜಿ ಕ್ಯಾಪ್ಟನ್ ಪ್ರೀತಮ್ ಸಿವಾಚ್ ಮಾತನಾಡಿದ್ದಾರೆ.
ಭಾರತ ಮಹಿಳಾ ಹಾಕಿ ತಂಡದ ಮಾಜಿ ಕ್ಯಾಪ್ಟನ್ ಪ್ರೀತಮ್ ಸಿವಾಚ್, ಈಟಿವಿ ಭಾರತ ಜೊತೆ ಮಾತನಾಡಿದ್ದು, ನಮ್ಮ ತಂಡ ಪದಕ ಗೆಲ್ಲುವ ವಿಶ್ವಾಸವಿದ್ದು, ಅದಕ್ಕಾಗಿ ಇಡೀ ಭಾರತವೇ ನಿರೀಕ್ಷೆ ಇಟ್ಟುಕೊಂಡಿದೆ ಎಂದರು. ತಂಡದಲ್ಲಿರುವ ನೇಹಾ, ಶರ್ಮಿಳಾ ಹಾಗೂ ನಿಶಾ ಸೋನಿಪತ್ನಲ್ಲಿ ಅಭ್ಯಾಸ ಮಾಡಿದ್ದು, ಪ್ರೀತಮ್ ಸಿವಾಚ್ ಅವರಿಗೆ ತರಬೇತಿ ಸಹ ನೀಡಿದ್ದಾರೆ. ಸದ್ಯದ ತಂಡದಲ್ಲಿ ಹರಿಯಾಣದ 9 ಆಟಗಾರ್ತಿಯರಿದ್ದು, ಬಲಿಷ್ಠವಾಗಿದೆ.
ಗುರ್ಜಿತ್ ಕೌರ್ ಮನೆಯಲ್ಲಿ ಸಂಭ್ರಮ
ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿ, ಭಾರತ ಹಾಕಿ ತಂಡ ಸೆಮಿಫೈನಲ್ಗೆ ಲಗ್ಗೆ ಹಾಕಲು ಕಾರಣವಾಗಿದ್ದು, ತಂಡದ ಆಟಗಾರ್ತಿ ಗುರ್ಜಿತ್ ಕೌರ್. 22ನೇ ನಿಮಿಷದಲ್ಲಿ ಗೋಲು ಗಳಿಕೆ ಮಾಡಿದ್ದರಿಂದ ಭಾರತ ಗೆಲುವಿನ ನಗೆ ಬೀರುವಂತಾಯಿತು. ತಂಡದ ಜಯದಲ್ಲಿ ಗುರ್ಜಿತ್ ಕೌರ್ ಬಹುಮುಖ್ಯ ಪಾತ್ರ ನಿರ್ವಹಿಸಿದ್ದರಿಂದ ಅವರ ಮನೆಯಲ್ಲಿ ಹಾಗೂ ಊರಿನಲ್ಲಿ ಸಂಭ್ರಮ ಮನೆ ಮಾಡಿತು.