ಮುಂಬೈ : ಭಾರತದ ಆರ್ಥಿಕತೆಯನ್ನು ಬೆಂಬಲಿಸಲು ಕೇಂದ್ರೀಯ ಬ್ಯಾಂಕ್ ಸಾಕಷ್ಟು ದ್ರವ್ಯತೆಯನ್ನು ಖಚಿತಪಡಿಸುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಇಂದು ಸಂಜೆ ಸಿಐಐ ಆಯೋಜಿಸಿದ್ದ ಉದ್ಯಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ರಷ್ಯಾವು ಉಕ್ರೇನ್ ಮೇಲೆ ನಡೆಸುತ್ತಿರುವ ಆಕ್ರಮಣದ ನಂತರ ಪ್ರಸ್ತುತ ಕಚ್ಚಾ ತೈಲದ ಬೆಲೆಗಳಲ್ಲಿ ಏರಿಕೆ ಮತ್ತು ಪ್ರಮುಖ ಸರಕುಗಳ ಬೆಲೆಗಳ ಏರಿಕೆ ಸೇರಿದಂತೆ ವಿವಿಧ ಸವಾಲುಗಳನ್ನು ಆರ್ಥಿಕತೆಯು ಎದುರಿಸುತ್ತಿದೆ. ಇದರ ಬೆನ್ನಲ್ಲೇ ಗವರ್ನರ್ ಆಶಾದಾಯಕ ಮಾತುಗಳನ್ನು ಆಡಿದ್ದಾರೆ.
ಇದನ್ನೂ ಓದಿ: ನಾಗಾಲ್ಯಾಂಡ್‌ನಿಂದ ರಾಜ್ಯಸಭೆಗೆ ಮೊದಲ ಮಹಿಳೆ ಆಯ್ಕೆ: ಕೇರಳದಲ್ಲಿ 4 ದಶಕದ ನಂತರ ಅವಕಾಶ
ಮಾರ್ಚ್ 2020 ರಲ್ಲಿ ಸಾಂಕ್ರಾಮಿಕ ರೋಗದಿಂದ ಬಸವಳಿದಿದ್ದ ಆರ್ಥಿಕತೆಗೆ 17 ಲಕ್ಷ ಕೋಟಿ ರೂಪಾಯಿಗಳ ಬಂಡವಾಳವನ್ನು ತುಂಬಿಸಲಾಗಿದೆ ಎಂದು ಹೇಳಿದ ಅವರು, ಆರ್ಥಿಕತೆಯಲ್ಲಿ ಸಾಕಷ್ಟು ದ್ರವ್ಯತೆ ಇರುವುದನ್ನು ಖಚಿತಪಡಿಸಿಕೊಳ್ಳಲು ಆರ್‌ಬಿಐ ಮುಂದುವರೆಯುತ್ತಿದೆ. ಬಂಡವಾಳ ಸಮರ್ಪಕತೆ ಅನುಪಾತ ಶೇ.16ರಷ್ಟಿದ್ದು, ಒಟ್ಟಾರೆ ಎನ್‌ಪಿಎ (ಅನುತ್ಪಾದಕ ಆಸ್ತಿಗಳು) ಅಂದರೆ ಕೆಟ್ಟ ಸಾಲಗಳು 6.5ರಷ್ಟಿದೆ. ಈಗ ಬ್ಯಾಂಕ್‌ಗಳ ಸ್ಥಿತಿ ಉತ್ತಮವಾಗಿದೆ ಎಂದು ಹೇಳಿದರು.
ರಷ್ಯಾ-ಉಕ್ರೇನ್ ಯುದ್ಧದ ಸವಾಲುಗಳ ಹೊರತಾಗಿಯೂ, ಹೆಚ್ಚಿನ ವಿದೇಶಿ ವಿನಿಮಯ ಮೀಸಲು ಮತ್ತು ಕಡಿಮೆ ಚಾಲ್ತಿ ಖಾತೆ ಕೊರತೆಯೊಂದಿಗೆ ಆರ್ಥಿಕತೆಯು ಉತ್ತಮ ಸ್ಥಿತಿಯಲ್ಲಿದೆ. ಚಾಲ್ತಿ ಖಾತೆ ಕೊರತೆ (ಸಿಎಡಿ) ಗೆ ಹಣಕಾಸು ಒದಗಿಸುವ ವಿಷಯದಲ್ಲಿ ಯಾವುದೇ ಸವಾಲನ್ನು ಎದುರಿಸಲು ನಾವು ತೃಪ್ತಿದಾಯಕ ಸ್ಥಿತಿಯಲ್ಲಿದ್ದೇವೆ. ಮುಂದೆ ಯಾವುದೇ ಸವಾಲನ್ನು ಎದುರಿಸಲು ಕೇಂದ್ರೀಯ ಬ್ಯಾಂಕ್ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಒತ್ತಿ ಹೇಳಿದರು.