ಚೆನ್ನೈ(ತಮಿಳುನಾಡು): 44ನೇ ಚೆಸ್ ಒಲಿಂಪಿಯಾಡ್ನಲ್ಲಿ ಭಾರತದ A ಮತ್ತು B ತಂಡಗಳು ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಈ ಟೀಂಗಳಿಗೆ ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ 1 ಕೋಟಿ ರೂಪಾಯಿ ನಗದು ಬಹುಮಾನ ನೀಡಿದ್ದಾರೆ.
ಮಹಾಬಲೀಪುರಂನಲ್ಲಿ ನಡೆದ ಪಂದ್ಯಾವಳಿಯಲ್ಲಿ ಯುವ ಆಟಗಾರರಾದ ಡಿ ಗುಕೇಶ್, ಆರ್ ಪ್ರಗ್ನಾನಂದ , ನಿಹಾಲ್ ಸರಿನ್, ರೌನಕ್ ಸಾಧ್ವನಿ, ಬಿ ಅಧಿಬನ್ ಮತ್ತು ಕೊನೇರು ಹಂಪಿ, ಆರ್ ವೈಶಾಲಿ ಪಾಲ್ಗೊಂಡಿದ್ದರು. ಭಾರತೀಯ ಮಹಿಳೆಯರು 11ನೇ ಪಂದ್ಯದಲ್ಲಿ ಯುಎಸ್ ವಿರುದ್ಧ ಸೋಲುವ ಮೂಲಕ ಕಂಚಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ತಮಿಳುನಾಡು ಸರ್ಕಾರದ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಚೆಸ್ ಒಲಿಂಪಿಯಾಡ್ ಕ್ರೀಡಾಕೂಟ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಉಜ್ಬೇಕಿಸ್ತಾನ ಚಿನ್ನ ಗೆದ್ದರೆ, ಅರ್ಮೇನಿಯಾ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದೆ.
ಇದನ್ನೂ ಓದಿ: ಚೆಸ್ ಒಲಿಂಪಿಯಾಡ್ ಕ್ರೀಡಾಕೂಟ ಮುಕ್ತಾಯ: ಹಂಗೇರಿಗೆ ಫಿಡೆ ಧ್ವಜ ಹಸ್ತಾಂತರ
ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಚೆಸ್ ಒಲಿಂಪಿಯಾಡ್ನಲ್ಲಿ ಭಾರತ ಪದಕ ಗೆದ್ದಿರುವುದು ಎಲ್ಲರೂ ಹೆಮ್ಮೆ ಪಡುವಂತಹ ವಿಷಯ. ಈ ತಂಡಗಳಿಗೆ ಸರ್ಕಾರ ಒಂದು ಕೋಟಿ ರೂಪಾಯಿ ನಗದು ಬಹುಮಾನ ನೀಡುತ್ತಿದೆ ಎಂದರು.
ಕ್ರೀಡಾಕೂಟದಲ್ಲಿ 187 ದೇಶಗಳ ಆಟಗಾರರು ಭಾಗಿಯಾಗಿದ್ದರು. ಜುಲೈ 28ರಿಂದ ಆರಂಭಗೊಂಡಿದ್ದ ಕ್ರೀಡಾಕೂಟ ಆಗಸ್ಟ್ 9 ರಂದು ಮುಕ್ತಾಯವಾಗಿದ್ದು, ಇಂದು ಸಮಾರೋಪ ಸಮಾರಂಭ ನಡೆಯಿತು. ಒಲಿಂಪಿಯಾಡ್ನಲ್ಲಿ ಪದಕ ಗೆದ್ದಿರುವ ಎರಡು ತಂಡಗಳಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.