ವಾಷಿಂಗ್ಟನ್(ಅಮೆರಿಕ): ಭಾರತ - ಚೀನಾ ಗಡಿ ವಿವಾದದಲ್ಲಿ ಭಾರತದ ಪರ ನಿಲ್ಲುವುದಾಗಿ ತಿಳಿಸಿರುವ ಅಮೆರಿಕ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಸುಧಾರಣೆಯ ಬಗ್ಗೆಯೂ ಮಾತನಾಡಿದೆ.
ಈ ವರ್ಷ ಭಾರತ ಮತ್ತು ಅಮೆರಿಕ ಕೊರೊನಾ ಸಾಂಕ್ರಾಮಿಕ, ಹವಾಮಾನ ಬದಲಾವಣೆ ವಿರುದ್ಧದ ಹೋರಾಟ, ಕ್ವಾಡ್ ವಿಸ್ತರಣೆ, ಹೊಸ ತಂತ್ರಜ್ಞಾನಗಳ ಅಳವಡಿಕೆಯಲ್ಲಿ ಪಾಲುದಾರರಾಗಲಿದ್ದೇವೆ ಎಂದು ಶ್ವೇತಭವನ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ತಿಳಿಸಿದ್ದಾರೆ.
ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ಸಭೆ ಉಭಯ ದೇಶಗಳ ಸಂಬಂಧ ಸುಧಾರಣೆಗೆ ಹೊಸ ಅಧ್ಯಾಯ ಬರೆದಿತ್ತು. ಅದರಂತೆ ಎರಡೂ ರಾಷ್ಟ್ರಗಳು ವಿದೇಶಾಂಗ ಮತ್ತು ಅಂತಾರಾಷ್ಟ್ರೀಯ ವಿಚಾರಗಳಲ್ಲಿ ಪರಸ್ಪರ ಸಹಕರಿಸಲಿವೆ ಎಂದು ಅವರು ತಿಳಿಸಿದ್ದಾರೆ.
ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಟ ಉಭಯ ರಾಷ್ಟ್ರಗಳ ಮೊದಲ ಆದ್ಯತೆಯಾಗಿರಲಿದೆ. ಇದಲ್ಲದೇ, ಕ್ವಾಡ್(ಭದ್ರತೆ) ಮೂಲಕ ಪರಸ್ಪರ ಸಹಕಾರ, ಹವಾಮಾನ ಬದಲಾವಣೆ ವಿರುದ್ಧ ಹೋರಾಟ, ವ್ಯಾಪಾರ, ವಿದೇಶಾಂಗ ನೀತಿಗಳ ವಿಸ್ತರಣೆಯಲ್ಲಿ ಉನ್ನತ ಮಟ್ಟದ ಬದಲಾವಣೆಗೆ ಎರಡೂ ರಾಷ್ಟ್ರಗಳು ಮುಂದಾಗಲಿವೆ ಎಂದು ಜೆನ್ ಸಾಕಿ ಹೇಳಿದರು.
ಹೂಡಿಕೆ, ವ್ಯಾಪಾರ - ವಹಿವಾಟಿನಲ್ಲಿ ಈ ವರ್ಷ ಮಹತ್ತರ ಬದಲಾವಣೆ ಕಾಣಲಿದೆ. ಸೈಬರ್ ಮತ್ತು ಹೊಸ, ಉದಯೋನ್ಮುಖ ತಂತ್ರಜ್ಞಾನಗಳ ಅಳವಡಿಕೆಯೂ ಈ ವರ್ಷದ ಮಾರ್ಗಸೂಚಿಗಳಲ್ಲಿ ಇದೆ ಎಂದು ಶ್ವೇತಭವನ ತಿಳಿಸಿದೆ.
ಇದನ್ನೂ ಓದಿ: ಚೀನಾದೊಂದಿಗಿನ ಗಡಿ ವಿವಾದದಲ್ಲಿ ಅಮೆರಿಕ ಭಾರತದ ಪರ ನಿಲ್ಲುತ್ತದೆ: ಶ್ವೇತಭವನ