ಗೋರಖ್‌ಪುರ(ಉತ್ತರ ಪ್ರದೇಶ): ಇದುವರೆಗೂ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸದಿರುವುದು ರಾಜಕೀಯ ಪಕ್ಷಗಳ ಪಾಲಿಗೆ ನಾಚಿಕೆಗೇಡು ಎಂದು ಪುರಿ ಪೀಠದ ಗೋವರ್ಧನ ಮಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಶ್ರೀಗಳು ಶುಕ್ರವಾರ ಹೇಳಿದ್ದಾರೆ.
ಗೋರಖ್‌ಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದೇಶಾದ್ಯಂತ ಪ್ರಸ್ತುತ ಪರಿಸ್ಥಿತಿ ಉಲ್ಲೇಖಿಸುತ್ತಾ, ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಲಾಗುವುದು ಎಂದು ಭವಿಷ್ಯ ನುಡಿದರು.
ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ (ಮಾಧ್ಯಮಗಳು) ಭಾರತವನ್ನು ಹಿಂದೂ ರಾಷ್ಟ್ರವಾಗಲು ಕಾರಣ ಕಂಡುಕೊಂಡರೆ, ಅದು ನಮ್ಮನ್ನು ಬೆಂಬಲಿಸಬೇಕು. ಮಾಧ್ಯಮಗಳ ಸಹಕಾರ ಮತ್ತು ಜವಾಬ್ದಾರಿಯ ಪ್ರಜ್ಞೆಯಿಂದ ನಮಗೆ ಮತ್ತಷ್ಟು ಶಕ್ತಿ ಬರುತ್ತದೆ ಎಂದು ಸ್ವಾಮಿ ನಿಶ್ಚಲಾನಂದ ಸರಸ್ವತಿ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ ರಾಜಕಾರಣಿಗಳಿಗೆ ಕೊರತೆಯಿಲ್ಲ. ಆದರೆ, ಅವರಿಗೆ ರಾಜಕೀಯ ಎಂದರೆ ಏನು ಎಂಬುದೇ ಗೊತ್ತಿಲ್ಲ. ಇದು ನಮ್ಮ ರಾಷ್ಟ್ರದ ವಿಪರ್ಯಾಸ. ಧರ್ಮದಿಂದ ಬೇರ್ಪಟ್ಟ ಮತ್ತು ದೇಶಭಕ್ತಿಯ ಕೊರತೆಯಿರುವ ಯಾವುದೇ ವ್ಯಕ್ತಿಗೆ ತನ್ನಲ್ಲಿ ಸಂತೋಷ ಕಂಡುಕೊಳ್ಳಲು ಸಾಧ್ಯವಿಲ್ಲ. ಜೊತೆಗೆ ಸಮಾಜಕ್ಕೂ ಕೂಡಾ ಏನೂ ನೀಡಲು ಸಾಧ್ಯವಿಲ್ಲ ಎಂದು ಶ್ರೀಗಳು ಹೇಳಿದರು.
ಅಧಿಕಾರದಲ್ಲಿರುವ ವ್ಯಕ್ತಿಯು ತನ್ನ ಭಾರವನ್ನು ಬೇರೆಯವರ ಮೇಲೆ ಹಾಕಲು ಆರಂಭಿಸಿದಾಗ ವಿವಿಧ ರೀತಿಯ ಸಮಸ್ಯೆಗಳು ಉದ್ಭವಿಸುತ್ತವೆ. ರಾಜಕೀಯ, ಮಾಧ್ಯಮ ಅಥವಾ ಧಾರ್ಮಿಕ ಸ್ಥಳಗಳಾಗಿದ್ದರೂ ಪ್ರತಿಯೊಂದು ಕ್ಷೇತ್ರಕ್ಕೂ ಈ ಮಾತು ಅನ್ವಯಿಸುತ್ತದೆ ಎಂದು ನಿಶ್ಚಲಾನಂದ ಸ್ವಾಮಿಗಳು ಅಭಿಪ್ರಾಯಪಟ್ಟರು.
ಇದನ್ನೂ ಓದಿ:'ಇಂಡಿಯನ್ ಮೈಕಲ್ ಜಾಕ್ಸನ್' ಜೊತೆ ಹೆಜ್ಜೆ ಹಾಕಿ ಮರೆಯಾದ 'ವೀರ ಕನ್ನಡಿಗ'