ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 14,306 ಕೋವಿಡ್ ಸೋಂಕಿತರು ಪತ್ತೆಯಾಗಿದ್ದು, 443 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಕೇರಳದಲ್ಲೇ 8,538 ಪ್ರಕರಣಗಳು ಹಾಗೂ 71 ಸಾವು ವರದಿಯಾಗಿವೆ. ದೇಶದಲ್ಲಿ ಒಟ್ಟು ಕೊರೊನಾ ಕೇಸ್ಗಳ ಸಂಖ್ಯೆ 3,41,89,774 ಹಾಗೂ ಮೃತರ ಸಂಖ್ಯೆ 4,54,712ಕ್ಕೆ ಹೆಚ್ಚಳವಾಗಿದೆ.
ನಿನ್ನೆ ಒಂದೇ ದಿನ 18,762 ಸೋಂಕಿತರು ಆಸ್ಪತ್ರೆಯಿಂದ ಹೊರಬಂದಿದ್ದು, ಇಲ್ಲಿಯವರೆಗೆ ಶೇ.98.18 ಅಂದರೆ ಒಟ್ಟು 3,35,67,367 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಬಳಿಕ ಆ್ಯಕ್ಟಿವ್ ಕೇಸ್ಗಳ ಪ್ರಮಾಣ ಶೇ.0.49ಕ್ಕೆ ಇಳಿಕೆ ಕಂಡಿದ್ದು, ಸದ್ಯ 1,67,695 ಪ್ರಕರಣಗಳು ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
102.27 ಕೋಟಿ ಡೋಸ್ ವ್ಯಾಕ್ಸಿನೇಷನ್
ಕೋವಿಡ್ ವ್ಯಾಕ್ಸಿನೇಷನ್ನಲ್ಲಿ ಐತಿಹಾಸಿಕ ಮೈಲಿಗಲ್ಲು ಸಾಧಿಸಿರುವ ಭಾರತ ಈವರೆಗೆ 102.27 ಕೋಟಿಗೂ ಅಧಿಕ ಡೋಸ್ ವ್ಯಾಕ್ಸಿನ್ ವಿತರಿಸಿದೆ.
ಇದನ್ನೂ ಓದಿ: ಎಚ್ಚರ..! ಏಷ್ಯಾ, ಯುರೋಪ್ನಲ್ಲಿ ಹರಡುತ್ತಿದೆ COVID Delta ರೂಪಾಂತರದ ಹೊಸ ತಳಿ
ಡೆಲ್ಟಾ ಪ್ಲಸ್ ಭೀತಿ
ಕೊರೊನಾ ವೈರಸ್ನ ಡೆಲ್ಟಾ ರೂಪಾಂತರದ ಹೊಸ ತಳಿ 'AY.4.2' ಅಥವಾ 'ಡೆಲ್ಟಾ ಪ್ಲಸ್' ಇಂಗ್ಲೆಂಡ್ನಲ್ಲಿ ಪತ್ತೆಯಾಗಿದೆ ಎಂದು ಬ್ರಿಟನ್ ಆರೋಗ್ಯ ಇಲಾಖೆ ಮೊನ್ನೆಯಷ್ಟೇ ತಿಳಿಸಿತ್ತು. ಇದು ಡೆಲ್ಟಾ ರೂಪಾಂತರದಷ್ಟು ಪ್ರಬಲ ಎಂಬುದಕ್ಕೆ ಇನ್ನೂ ಯಾವುದೇ ಪುರಾವೆ ಇಲ್ಲ. ಆದರೆ ಇದು ವೇಗವಾಗಿ ಹರಡುತ್ತಿರುವುದರಿಂದ ಏಷ್ಯಾ, ಯುರೋಪ್ನ ಅನೇಕ ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೇಳಲಾಗ್ತಿದೆ. ಭಾರತದಲ್ಲಿ ಈವರೆಗೆ ಡೆಲ್ಟಾ ಪ್ಲಸ್ ಪ್ರಕರಣ ಪತ್ತೆಯಾಗಿಲ್ಲವಾದರೂ, ಇದು ಹರಡದಂತೆ ತಡೆಯಲು ಕೇಂದ್ರ ಅರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ.