ಮುಂಬೈ: ಭಾರತವು ಮುಂದಿನ ಐದು ವರ್ಷಗಳಲ್ಲಿ 50 ಉಪಗ್ರಹಗಳನ್ನು ಉಡಾವಣೆ ಮಾಡುವ ಗುರಿ ಹೊಂದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್ ಸೋಮನಾಥ್ ತಿಳಿಸಿದರು. ಸೈನಿಕರ ಚಲನವಲನವನ್ನು ಮೇಲ್ವಿಚಾರಣೆ ಮಾಡುವ ಮತ್ತು ಸಾವಿರಾರು ಕಿಲೋಮೀಟರ್ ಪ್ರದೇಶದ ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯದೊಂದಿಗೆ ವಿವಿಧ ಕಕ್ಷೆಗಳಲ್ಲಿ ಉಪಗ್ರಹಗಳ ಪದರ ರಚನೆಯನ್ನು ಈ ಯೋಜನೆಯು ಒಳಗೊಂಡಿದೆ ಎಂದು ಇಸ್ರೋ ಅಧ್ಯಕ್ಷರು ಹೇಳಿದರು.
ಇಸ್ರೋದ ಉದ್ದೇಶವೇನು?: ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿ) ವಾರ್ಷಿಕ ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯಕ್ರಮವಾದ 'ಟೆಕ್‌ಫೆಸ್ಟ್' ಅನ್ನು ಉದ್ದೇಶಿಸಿ ಮಾತನಾಡಿದ ಸೋಮನಾಥ್, ಬದಲಾವಣೆಗಳನ್ನು ಪತ್ತೆಹಚ್ಚಲು ಉಪಗ್ರಹಗಳ ಸಾಮರ್ಥ್ಯ ಹೆಚ್ಚಿಸುವುದು, ಎಐ-ಸಂಬಂಧಿತ ಮತ್ತು ಡೇಟಾ-ಚಾಲಿತ ಪ್ರಯತ್ನವು ಡೇಟಾ ವಿಶ್ಲೇಷಣೆಗೆ ಮುಖ್ಯವಾಗಿದೆ ಎಂದರು.
ಬಾಹ್ಯಾಕಾಶ ನೌಕೆಯು ದೇಶದ ಗಡಿ ಮತ್ತು ನೆರೆಯ ಪ್ರದೇಶಗಳ ಮೇಲೆ ನಿಗಾ ಇಡುವ ಸಾಮರ್ಥ್ಯ ಹೊಂದಿದೆ. ಇದನ್ನೆಲ್ಲ ಉಪಗ್ರಹಗಳಿಂದ ನೋಡಬಹುದು. ಇದನ್ನು ನಿಭಾಯಿಸಲು ನಾವು ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದ್ದೇವೆ. ಆದರೆ ಈಗ ವಿಭಿನ್ನ ಚಿಂತನೆಯ ಮಾರ್ಗವಿದೆ ಮತ್ತು ನಾವು ಅದನ್ನು ಹೆಚ್ಚು ವಿಮರ್ಶಾತ್ಮಕ ರೀತಿಯಲ್ಲಿ ನೋಡಬೇಕಾಗಿದೆ ಎಂದು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಹೇಳಿದರು.
ಬಲಿಷ್ಠ ರಾಷ್ಟ್ರವಾಗಬೇಕೆಂಬ ಭಾರತದ ಆಕಾಂಕ್ಷೆಯನ್ನು ಸಾಕಾರಗೊಳಿಸಲು, ಅದರ ಉಪಗ್ರಹ ಫ್ಲೀಟ್‌ನ ಪ್ರಸ್ತುತ ಗಾತ್ರವು ಸಾಕಾಗುವುದಿಲ್ಲ. ಅದು ಇಂದಿನ ಸಾಮರ್ಥ್ಯದ ಹತ್ತು ಪಟ್ಟು ದೊಡ್ಡದಾಗಿರಬೇಕು. ಈ ವಿಶೇಷ ಜಿಯೋ-ಇಂಟೆಲಿಜೆನ್ಸ್ ಸಂಗ್ರಹವನ್ನು ಬೆಂಬಲಿಸಲು ನಾವು ಮುಂದಿನ ಐದು ವರ್ಷಗಳಲ್ಲಿ 50 ಉಪಗ್ರಹಗಳನ್ನು ಉಡಾವಣೆ ಮಾಡಲಿದ್ದೇವೆ. ಭಾರತವು ಈ ಮಟ್ಟದಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡಲು ಸಾಧ್ಯವಾದರೆ, ದೇಶವು ಎದುರಿಸುತ್ತಿರುವ ಅಪಾಯಗಳನ್ನು ಸುಳಬವಾಗಿ ಎದುರಿಸಬಹುದಾಗಿದೆ ಎಂದು ಸೋಮನಾಥ್ ತಿಳಿಸಿದರು.
ಶೀಘ್ರ ಜಿ20 ಉಪಗ್ರಹ ಉಡಾವಣೆ: ಸದ್ಯದಲ್ಲಿಯೇ ಜಿ-20 ಎಂಬ ಉಪಗ್ರಹ ಉಡಾವಣೆ ಮಾಡಲಾಗುವುದು. ಜಿ-20 ಅಧಿವೇಶನದ ಅಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ವಿಷಯವನ್ನು ಪ್ರಕಟಿಸಿದ್ದಾರೆ. ಜಿ-20 ಉಪಗ್ರಹಗಳು ಕೇವಲ ಜಿ20 ರಾಷ್ಟ್ರಗಳ ಹಿತಾಸಕ್ತಿಗೆ ಮಾತ್ರವಲ್ಲದೇ ಇಡೀ ವಿಶ್ವಕ್ಕೇ ಸೇವೆ ಸಲ್ಲಿಸಲಿವೆ. ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ವಿಜ್ಞಾನ ಮತ್ತು ತಂತ್ರಜ್ಞಾನ, ಶಾಂತಿ ಮತ್ತು ಜಾಗತಿಕ ವ್ಯವಹಾರಗಳು, ಪರಿಸರ, ಸಂಸ್ಕೃತಿ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಮೇಲೆ ಕೊಡುಗೆ ನೀಡುವ ಪ್ರಯತ್ನ ನಡೆದಿದೆ ಎಂದು ಈ ಹಿಂದೆ ಇಸ್ರೋ ಅಧ್ಯಕ್ಷ ಸೋಮನಾಥ್ ಹೇಳಿದ್ದರು.
ಓದಿ: ಜ.6ರಂದು ನಿಗದಿತ ಬಿಂದು ತಲುಪಲಿದೆ ಆದಿತ್ಯ ಎಲ್1: ಇಸ್ರೋ ಅಧ್ಯಕ್ಷ ಸೋಮನಾಥ್