ನವದೆಹಲಿ: ದೇಶದಲ್ಲಿ ನಿನ್ನೆ ಇಳಿಕೆ ದಾಖಲಿಸಿದ್ದ ಕೊರೊನಾ ಕೇಸ್ಗಳು ಇಂದು ಮತ್ತೆ ಏರಿಕೆಯಾಗಿವೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 16,156 ಹೊಸ ಕೇಸ್ಗಳು ಕಾಣಿಸಿಕೊಂಡಿವೆ. 28 ಮಂದಿ ಸೋಂಕಿಗೆ ಪ್ರಾಣ ತೆತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕಳೆದೊಂದು ದಿನದಲ್ಲಿ 15,394 ಜನರು ಕೋವಿಡ್ನಿಂದ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 4,29,07,327 ಜನರು ಮಹಾಮಾರಿಯಿಂದ ಚೇತರಿಸಿಕೊಂಡಿದ್ದಾರೆ. ಇದು 98.53 ಪ್ರತಿಶತದಷ್ಟಿದೆ. ಸದ್ಯಕ್ಕೆ ದೇಶದಲ್ಲಿ 1,15,212 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸಾವಿನ ಸಂಖ್ಯೆ 5,25,270 ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ದಿನಂಪ್ರತಿ ದಾಖಲಾಗುವ ಸಕ್ರಿಯ ಕೇಸುಗಳ ಪ್ರಮಾಣ ಶೇ.3.56 ರಷ್ಟಿದ್ದರೆ, ಗುಣಮುಖರಾಗುವವರು ಶೇ.98.53 ರಷ್ಟಿದೆ. ಪಾಸಿಟಿವಿಟಿ ದರ ಶೇ.2.90 ರಷ್ಟು ಇದ್ದರೆ, ವಾರದ ಪಾಸಿಟಿವಿಟಿ 3.81 ಪ್ರಮಾಣದಲ್ಲಿದೆ.
1. ಮಹಾರಾಷ್ಟ್ರದಲ್ಲಿ ಹೆಚ್ಚು: ದೇಶದಲ್ಲಿ ಮಹಾರಾಷ್ಟ್ರ ಅತಿಹೆಚ್ಚು ಕೊರೊನಾ ದಾಖಲಿಸುತ್ತಿದೆ. ನಿನ್ನೆ 2,962 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದ ನಂತರ ಇಂದು 3,098 ದೈನಂದಿನ ಪ್ರಕರಣಗಳು ಪತ್ತೆಯಾಗಿವೆ. ಒಂದೇ ದಿನ 6 ಸಾವು ಸಂಭವಿಸಿವೆ. ಮತ್ತೊಂದೆಡೆ ದೆಹಲಿಯಲ್ಲಿ ಇಂದು 615 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಮೂವರು ಸಾವನ್ನಪ್ಪಿದ್ದಾರೆ.
2. ಒಮಿಕ್ರಾನ್ ಉಪತಳಿ ಬಗ್ಗೆ ಎಚ್ಚರ: ಒಮಿಕ್ರಾನ್ನ ಉಪ ತಳಿಯಾದ BA 2.75 ದೇಶದ 10 ರಾಜ್ಯಗಳಿಗೆ ಹಬ್ಬಿದೆ. ಭಾರತದಲ್ಲಿ ಇದುವರೆಗೆ ಈ ತಳಿಯ 69 ಹೊಸ ಪ್ರಕರಣಗಳು ಕಂಡುಬಂದಿವೆ. ಅದರಲ್ಲಿ 27 ಮಹಾರಾಷ್ಟ್ರದಿಂದ ವರದಿಯಾದರೆ, ಪಶ್ಚಿಮ ಬಂಗಾಳ 13, ಕರ್ನಾಟಕ 10, ಹರಿಯಾಣ 6, ಮಧ್ಯಪ್ರದೇಶ 3, ಹಿಮಾಚಲ ಪ್ರದೇಶ 5, ತೆಲಂಗಾಣದಲ್ಲಿ 2 ಮತ್ತು ದೆಹಲಿ, ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರ ಪ್ರದೇಶದಲ್ಲಿ ತಲಾ ಒಂದು ಕೇಸ್ಗಳಿವೆ.
ಈ ಉಪ ತಳಿಗೆ ಈಗಿರುವ ಕೊರೊನಾ ಲಸಿಕೆಗಳು ಅಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡದು. ಹೀಗಾಗಿ ಜನರು ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಬೇಕು. ಲಸಿಕೆ ಹಾಕಿಸಿಕೊಂಡವರು ಅಥವಾ ಈಗಾಗಲೇ ಪ್ರತಿಕಾಯಗಳನ್ನು ವೃದ್ಧಿಸಿಕೊಂಡವರು ಕೂಡ ಹೊಸ ರೂಪಾಂತರ ದಾಳಿಗೆ ತುತ್ತಾಗುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
3. 4ನೇ ಡೋಸ್ಗೆ ಆಸ್ಟ್ರೇಲಿಯಾ ಸಮ್ಮತಿ: ಆಸ್ಟ್ರೇಲಿಯಾದಲ್ಲಿ ಕೊರೊನಾ ನಿಗ್ರಹಕ್ಕಾಗಿ 4 ನೇ ಡೋಸ್ ಲಸಿಕೆ ಪಡೆದುಕೊಳ್ಳಲು ಅಲ್ಲಿನ ಸರ್ಕಾರ ಅನುಮತಿ ನೀಡಿದೆ. ಆಸ್ಟ್ರೇಲಿಯಾದಲ್ಲಿ ದಿನಂಪ್ರತಿ 30 ಸಾವಿರಕ್ಕೂ ಅಧಿಕ ಕೊರೊನಾ ಕೇಸ್ಗಳು ದಾಖಲಾಗುತ್ತಿವೆ. ಹೀಗಾಗಿ 4ನೇ ಮುನ್ನೆಚ್ಚರಿಕೆ ಡೋಸ್ ಪಡೆದುಕೊಳ್ಳಲು ಸೂಚಿಸಿದೆ.
ಇದನ್ನೂ ಓದಿ: ಗೃಹ ಬಳಕೆ ಎಲ್ಪಿಜಿ ಸಿಲಿಂಡರ್ ಮತ್ತೆ 50 ರೂಪಾಯಿ ಹೆಚ್ಚಳ