ಕಾನ್ಪುರ: ಪಾನ್ ಮಸಾಲಾ ತಯಾರಿಕಾ ಘಟಕ ಮತ್ತು ರಿಯಲ್ ಎಸ್ಟೇಟ್ಗಳ ಮೇಲೆ ಐಟಿ(ಆದಾಯ ತೆರಿಗೆ) ಇಲಾಖೆ ದಾಳಿ ನಡೆಸಿ, ಶೋಧ ನಡೆಸಿದೆ. ಏಕಕಾಲಕ್ಕೆ ಕಾನ್ಪುರ, ನೋಯ್ಡಾ, ದೆಹಲಿ, ಗಾಜಿಯಾಬಾದ್ ಮತ್ತು ಕೋಲ್ಕತ್ತಾದಾದ್ಯಂತ ಒಟ್ಟು 31 ಸ್ಥಳಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಲೆಕ್ಕವಿಲ್ಲದ 400 ಕೋಟಿ ರೂಪಾಯಿ ಸಿಕ್ಕಿದೆ ಎನ್ನಲಾಗಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಹಣಕಾಸು ಸಚಿವಾಲಯವು, ಪಾನ್ ಮಸಾಲಾ ಕಂಪನಿಯು ಲೆಕ್ಕವಿಲ್ಲದಷ್ಟು ತಂಬಾಕನ್ನು ಮಾರಾಟ ಮಾಡುವ ಮೂಲಕ ಹಣ ಗಳಿಸಿದೆ. ಈ ಹಣದಿಂದ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿ ಬೃಹತ್ ಮೊತ್ತದ ಹಣ ಗಳಿಸಿದೆ ಎಂದು ತಿಳಿಸಿದೆ. ಶೋಧದ ವೇಳೆ ದೊರೆತ ಡಿಜಿಟಲ್ ಮತ್ತು ಪೇಪರ್ ಸಾಕ್ಷ್ಯಗಳು ಕಂಪನಿಗಳ ರಾಷ್ಟ್ರವ್ಯಾಪಿ ಜಾಲವನ್ನು ಬಹಿರಂಗಪಡಿಸಿವೆ ಎಂದು ಸಚಿವಾಲಯ ಹೇಳಿದೆ.
ಶೋಧ ಕಾರ್ಯಾಚರಣೆ ವೇಳೆ, ಕಂಪನಿಗಳ ನಿರ್ದೇಶಕರು ಯಾವುದೇ ಹಣಕಾಸಿನ ಸಾಮರ್ಥ್ಯ ಹೊಂದಿರದ ವ್ಯಕ್ತಿಗಳು ಎಂದು ತಿಳಿದು ಬಂದಿದೆ. ಕೆಲ ವ್ಯಕ್ತಿಗಳು ಆದಾಯ ತೆರಿಗೆ ರಿಟರ್ನ್ಸ್ ಸಹ ಸಲ್ಲಿಸುತ್ತಿಲ್ಲ. ಇನ್ನೂ ಕೆಲವರು ಕಡಿಮೆ ಮೊತ್ತದ ತೆರಿಗೆ ಪಾವತಿಸುತ್ತಿದ್ದಾರೆ. ಅಲ್ಲದೇ, ದಾಖಲೆಗಳಲ್ಲಿ ಉಲ್ಲೇಖಿಸಿರುವ ವಿಳಾಸಗಳಲ್ಲಿ ಕಂಪನಿಗಳು ಇಲ್ಲ ಎಂದು ತಿಳಿದು ಬಂದಿದೆ.
ಆದರೂ, ಈ ಕಂಪನಿಗಳು ಕೇವಲ ಮೂರು ವರ್ಷಗಳಲ್ಲಿ 226 ಕೋಟಿ ರೂ ಮೊತ್ತದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಿವೆ. ಅಂತಹ 115 ಶೆಲ್ ಕಂಪನಿಗಳ ಜಾಲ ಪತ್ತೆಯಾಗಿದೆ. ಡಿಜಿಟಲ್ ಡೇಟಾದ ವಿಧಿವಿಜ್ಞಾನ ವಿಶ್ಲೇಷಣೆ ಪ್ರಗತಿಯಲ್ಲಿದೆ. ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಿರ್ದೇಶಕರು ನಕಲಿ ಎಂದು ಅವರೇ ಒಪ್ಪಿಕೊಂಡಿದ್ದು, ಕಮಿಷನ್ಗಾಗಿ ಈ ದಂಧೆ ನಡೆಸುತ್ತಿದ್ದಾರೆ.
ಪರಿಶೀಲನೆ ವೇಳೆ ಅಧಿಕಾರಿಗಳು ರಹಸ್ಯ ಅಡಗುತಾಣಗಳನ್ನು ಪತ್ತೆ ಮಾಡಲಾಗಿದ್ದು, ಲೆಕ್ಕವಿಲ್ಲದ ಹಣದ ವಿವರಗಳು, ಹಣ ವರ್ಗಾವಣೆ ಪ್ರಕ್ರಿಯೆಯ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಇದುವರೆಗೆ ಶೆಲ್ ಕಂಪನಿಗಳ 34 ನಕಲಿ ಬ್ಯಾಂಕ್ ಖಾತೆಗಳು ಪತ್ತೆಯಾಗಿವೆ.
ಶೋಧದ ಸಮಯದಲ್ಲಿ, 52 ಲಕ್ಷ ರೂಪಾಯಿ ನಗದು, 7 ಕೆ.ಜಿ. ಚಿನ್ನ ಪತ್ತೆಯಾಗಿದ್ದು, ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪ್ರಾಥಮಿಕ ಅಂಕಿ - ಅಂಶಗಳ ಪ್ರಕಾರ, ಲೆಕ್ಕವಿಲ್ಲದ 400 ಕೋಟಿ ರೂಪಾಯಿಗೂ ಅಧಿಕ ವ್ಯವಹಾರ ನಡೆದಿದೆ ಎನ್ನಲಾಗಿದೆ.