ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಮಳೆಯಾಗುತ್ತಿದೆ. ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯು ಇಂದೂ ಮುಂದುವರಿದಿದೆ. ಮುಂದಿನ ಎರಡು ಗಂಟೆಗಳಲ್ಲಿ ದೆಹಲಿ - ಎನ್ಸಿಆರ್ನ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ 2 ಗಂಟೆಗಳಲ್ಲಿ ಉತ್ತರ ದೆಹಲಿ, ಗರ್ಮುಕ್ತೇಶ್ವರ, ಖೇಕ್ರಾ, ಬಾಗಪತ್, ನರ್ವಾನಾ, ಕೈತಾಲ್, ರೋಹ್ಟಕ್, ಖಾರ್ಖೋಂಡಾಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತುಂತುರು ಮಳೆಯಾಗಲಿದೆ ಎಂದು ಐಎಂಡಿ ಟ್ವೀಟ್ ಮಾಡಿದೆ.
ಕಳೆದ 121 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 24 ಗಂಟೆಗಳಲ್ಲಿ ಅಧಿಕ ಮಳೆಯಾಗಿದೆ ಎಂದು IMD ಯ ಹಿರಿಯ ವಿಜ್ಞಾನಿ ಡಾ. ಆರ್.ಕೆ.ಜೇನಮಣಿ ಅಭಿಪ್ರಾಯ ಪಟ್ಟಿದ್ದಾರೆ.
ಸೆಪ್ಟೆಂಬರ್ನಲ್ಲಿ 390 ಮಿ.ಮೀ ಮಳೆಯಾಗಿದ್ದು, ಇದು ಕಳೆದ 77 ವರ್ಷಗಳಲ್ಲೇ ಸುರಿದ ಅಧಿಕ ಮಳೆಯಾಗಿದೆ. 4 ತಿಂಗಳಲ್ಲಿ 1139 ಮಿ.ಮೀಟರ್ ಮಳೆಯಾಗಿದೆ. ಅಂದರೆ, ಇದು 46 ವರ್ಷಗಳಲ್ಲೇ ಅಧಿಕವಾಗಿದೆ ಎಂದು ಜೇನಮಣಿ ಹೇಳಿದ್ದಾರೆ.
ಕರ್ನಾಟಕದಲ್ಲೂ ವರುಣಾರ್ಭಟ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ವಿವಿಧ ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಶಿವಮೊಗ್ಗ, ಮಂಗಳೂರು, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಕಳದ ಕೆಲ ದಿನಗಳಿಂದ ಮಳೆಯಾಗುತ್ತಿದೆ. ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ಭಾರತಿಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಿವಿಧ ರಾಜ್ಯಗಳಲ್ಲೂ ಧಾರಾಕಾರ ಮಳೆ
ಕಳೆದ 24 ಗಂಟೆಗಳಲ್ಲಿ, ದೆಹಲಿ, ಹರಿಯಾಣ, ಪೂರ್ವ ರಾಜಸ್ಥಾನ, ಮಧ್ಯಪ್ರದೇಶದ ಕೆಲವು ಭಾಗ ಹಾಗೂ ಕೋಸ್ಟಲ್ ಒಡಿಶಾ, ಜಾರ್ಖಂಡ್, ಮಹಾರಾಷ್ಟ್ರದಲ್ಲೂ ಮಳೆಯಾಗಿದೆ. ಕೇರಳ, ದಕ್ಷಿಣ ಗುಜರಾತ್, ಕೊಂಕಣ ಮತ್ತು ಗೋವಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಾಧಾರಣ ಮಳೆಗಿಂತ ಹೆಚ್ಚಿನ ಮಳೆಯಾಗಿದೆ.
ಇದನ್ನೂ ಓದಿ: ಮಹಾ ಮಳೆಗೆ ರಾಷ್ಟ್ರ ರಾಜಧಾನಿ ತತ್ತರ: ದೆಹಲಿ ಏರ್ಪೋರ್ಟ್ ಜಲಾವೃತ
ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಗುಜರಾತ್, ಒಡಿಶಾ, ಛತ್ತೀಸ್ಗಢ, ತೆಲಂಗಾಣ, ವಿದರ್ಭ ಮತ್ತು ಮಧ್ಯಪ್ರದೇಶದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕೊಂಕಣ ಮತ್ತು ಗೋವಾ, ಕರಾವಳಿ ಕರ್ನಾಟಕ ಮತ್ತು ಕೇರಳದ ಹಲವೆಡೆ ಭಾರಿ ಮಳೆಯಾಗುವ ನಿರೀಕ್ಷೆಯಿದೆ.