ಹೈದರಾಬಾದ್: ದೇಶದಲ್ಲಿ ಅತೀ ಎತ್ತರದ ಗಣೇಶ ವಿಗ್ರಹಗಳನ್ನು ವಿನಾಯಕ ಚತುರ್ಥಿಯಂದು ಸ್ಥಾಪನೆ ಮಾಡಿ ಪೂಜೆ ಸಲ್ಲಿಸುವ ಕೆಲ ಸ್ಥಳಗಳಲ್ಲಿ ತೆಲಂಗಾಣದ ಖೈರತಾಬಾದ್ ಸಹ ಪ್ರಸಿದ್ಧಿ ಪಡೆದಿದೆ.
ಇನ್ನು ಇಲ್ಲಿಯವರೆಗೆ ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ವಿಗ್ರಹಗಳನ್ನು ಇಲ್ಲಿ ಸ್ಥಾಪಿಸಿ ಪೂಜಿಸಲಾಗುತ್ತಿತ್ತು. ಆದರೆ, ಮುಂದಿನ ವರ್ಷದಿಂದ ಮಣ್ಣಿನ ವಿಗ್ರಹವನ್ನು ನಿರ್ಮಿಸಲು ಇಲ್ಲಿನ ಗಣೇಶ ಉತ್ಸವ ಸಮಿತಿ ನಿರ್ಧರಿಸಿದೆ. ಮುಂದಿನ ವರ್ಷ 70 ಅಡಿ ಎತ್ತರದ ಮಣ್ಣಿನ ಗಣೇಶ ಮೂರ್ತಿಯನ್ನು ಸ್ಥಾಪಿಸಲಾಗುವುದು ಎಂದು ಸಮಿತಿ ಪ್ರತಿನಿಧಿಗಳು ಈಗಾಗಲೇ ಘೋಷಿಸಿದ್ದಾರೆ.
ಪಿಒಪಿ ವಿಗ್ರಹಗಳನ್ನು ನಿಮಜ್ಜನ ಮಾಡಿದಾಗ ನೀರು ಕಲುಷಿತಗೊಳ್ಳುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ಮಣ್ಣಿನ ವಿಗ್ರಹವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಸಂಘಟಕರು ನಿರ್ಧಾರ ತೆಗೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೆ, ನಿಮಜ್ಜನಕ್ಕೂ ಮುನ್ನ ನಡೆಯುವ ಬೃಹತ್ ಮೆರವಣಿಗೆಯನ್ನು ತಪ್ಪಿಸಲು ಮೂರ್ತಿ ಸ್ಥಾಪನೆ ಮಾಡಿದ ಸ್ಥಳದಲ್ಲಿಯೇ ನಿಮಜ್ಜನಕ್ಕೂ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.