ಹೈದರಾಬಾದ್: ವಿದೇಶಿ ಕ್ಯಾಸಿನೊ ವಿಚಾರ ರಾಜಕೀಯ ಆಯಾಮ ಪಡೆದುಕೊಳ್ಳುತ್ತಿದೆ. ನೇಪಾಳ, ಶ್ರೀಲಂಕಾ, ಥಾಯ್ಲೆಂಡ್, ಮಲೇಷ್ಯಾ ಮತ್ತು ಇತರ ದೇಶಗಳಲ್ಲಿ ಕ್ಯಾಸಿನೋಗಳ ನಿರ್ವಹಣೆಯಲ್ಲಿ ತೊಡಗಿರುವ ಚಿಕೋಟಿ ಪ್ರವೀಣ್ ಅವರೊಂದಿಗೆ ಹಲವಾರು ಶಾಸಕರ ವಾಟ್ಸಾಪ್ ಸಂಭಾಷಣೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಗುರುತಿಸಿದೆ ಎಂದು ವರದಿಯಾಗಿದೆ.
ಹೈದರಾಬಾದ್ ಕ್ಯಾಸಿನೊ ಪ್ರಕರಣ : ವಿದೇಶಿ ಕ್ಯಾಸಿನೊಗಳಲ್ಲಿ ಹಣಕಾಸು ವ್ಯವಹಾರದಲ್ಲಿ ಅಕ್ರಮ ಹಣ ವರ್ಗಾವಣೆ ಕುರಿತು ಇಡಿ ಕೆಲ ದಿನಗಳಿಂದ ವಿಚಾರಣೆ ನಡೆಸುತ್ತಿರುವುದು ಗೊತ್ತಿದೆ. ಕಳೆದ ತಿಂಗಳ ಕೊನೆಯಲ್ಲಿ ಇಡಿ ಅಧಿಕಾರಿಗಳು ಮತ್ತೊಬ್ಬ ಏಜೆಂಟ್ ದಾಸರಿ ಮಾಧವರೆಡ್ಡಿ ಜೊತೆಗೆ ಪ್ರವೀಣ್ ಅವರ ಮನೆಯನ್ನು ಶೋಧಿಸಿ ಹಲವು ತಾಂತ್ರಿಕ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಸೆಲ್‌ಫೋನ್‌ಗಳ ಜೊತೆಗೆ ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡು ತನಿಖೆಯಲ್ಲಿ ತೊಡಗಿದ್ದಾರೆ.
ಈ ವೇಳೆ ತೆಲಂಗಾಣದ ಮೂವರು ಶಾಸಕರು ಮತ್ತು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಮಾಜಿ ಶಾಸಕ ಪ್ರವೀಣ್ ಜೊತೆ ನಡೆಸಿದ ವಾಟ್ಸಾಪ್ ಸಂಭಾಷಣೆಯನ್ನು ಇಡಿ ಗುರುತಿಸಿದೆ. ಇವುಗಳ ಸಾರವನ್ನು ಆಳವಾಗಿ ವಿಶ್ಲೇಷಿಸುವುದು. ಇವರಲ್ಲಿ ಯಾರಾದರೂ ಪ್ರವೀಣ್ ಜೊತೆ ಹಣಕಾಸಿನ ವ್ಯವಹಾರ ನಡೆಸಿದ್ದಾರಾ?.. ಅವರ ಮೂಲಕ ಅಕ್ರಮ ಹಣ ವರ್ಗಾವಣೆ ನಡೆದಿದೆಯೇ?.. ಎಂಬುದ ಕುರಿತು ಇಡಿ ಪರಿಶೀಲಿಸುತ್ತಿದೆ.
ಡಿಲೀಟ್ ಆದ ಮಾಹಿತಿ ಹಿಂಪಡೆಯಲು ಇಡಿ ಪ್ರಯತ್ನ: ಈ ಹಿಂದೆ ಪ್ರವೀಣ್ ಆಯೋಜಿಸಿದ್ದ ಸಮಾರಂಭಗಳಲ್ಲಿ ಹಲವು ಸಚಿವರು, ಮಾಜಿ ಸಚಿವರು, ಶಾಸಕರು ಭಾಗವಹಿಸಿದ್ದರು. ಕ್ಯಾಸಿನೊ ಪ್ರಕರಣದ ಇಡಿ ತನಿಖೆ ಆರಂಭವಾದ ನಂತರ ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಸಂದರ್ಭಗಳಲ್ಲಿ, ವಾಟ್ಸಾಪ್ ಚಾಟ್‌ಗಳ ವಿಷಯವು ಇತ್ತೀಚೆಗೆ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪ್ರವೀಣ್ ಮತ್ತು ಮಾಧವರೆಡ್ಡಿ ಅವರ ಸೆಲ್ ಫೋನ್ಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸುವ ಮೂಲಕ ಡಿಲೀಟ್ ಆಗಿರುವ ಸಂಭಾಷಣೆಗಳನ್ನು ಹಿಂಪಡೆಯಲು ಇಡಿ ಪ್ರಯತ್ನಿಸುತ್ತಿದೆ. ಇಡಿ ಮೂಲಗಳ ಪ್ರಕಾರ ತನಿಖೆ ಅಂತ್ಯಗೊಂಡರೆ, ಪ್ರಮುಖ ಮಾಹಿತಿ ಬಹಿರಂಗಗೊಳ್ಳುವ ಅವಕಾಶವಿದ್ದು, ನಂತರವಷ್ಟೇ ಅಕ್ರಮ ಹಣ ವರ್ಗಾವಣೆ ವಿಚಾರಕ್ಕೆ ಸ್ಪಷ್ಟತೆ ಸಿಗಲಿದೆಯಂತೆ.
ಕ್ಯಾಸಿನೊ ನನ್ನ ವ್ಯಾಪಾರ: ಶುಕ್ರವಾರ ಇಡಿ ಕಚೇರಿಯಲ್ಲಿ ತನಿಖೆ ಮುಕ್ತಾಯಗೊಂಡ ಬಳಿಕ ಚಿಕ್ಕೋಟಿ ಪ್ರವೀಣ್ ಮಾಧ್ಯಮದವರೊಂದಿಗೆ ಮಾತನಾಡಿ, ಕ್ಯಾಸಿನೋ ನಿರ್ವಹಣೆ ನನ್ನ ವ್ಯವಹಾರ. ನಾನು ಹುಟ್ಟಿ ಬೆಳೆದದ್ದು ಹೈದರಾಬಾದ್‌ನಲ್ಲಿ. ಸಹಜವಾಗಿಯೇ ಸಿನಿಮಾ, ರಾಜಕೀಯ ಗಣ್ಯರ ಪರಿಚಯವಿರುತ್ತದೆ. ಅದರಲ್ಲಿ ತಪ್ಪೇನಿದೆ. ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ಈ ಬಗ್ಗೆ ಏನನ್ನೂ ಹೇಳುವುದಿಲ್ಲ. ನನ್ನ ಜೀವಕ್ಕೆ ಅಪಾಯವಿದೆ. ನಾನು ರಕ್ಷಣೆ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇನೆ. ನನ್ನ ವಿರುದ್ಧ ಸುಳ್ಳು ಹಬ್ಬಿಸುವವರನ್ನು ಬಿಡುವುದಿಲ್ಲ ಎಂದ ಹೇಳಿದರು.
ಶಾಸಕರಿಗೆ ನೋಟಿಸ್ ಎಂದು ಪ್ರಚಾರ: ಕ್ಯಾಸಿನೊ ಪ್ರಕರಣದಲ್ಲಿ ಶಾಸಕರಿಗೆ ಇಡಿ ನೋಟಿಸ್ ಜಾರಿ ಮಾಡಿದೆ ಎಂದು ಶುಕ್ರವಾರ ಮಾಧ್ಯಮಗಳಲ್ಲಿ ಬಿತ್ತರವಾಗಿತ್ತು. ಇದರೊಂದಿಗೆ ಸಚಿವರೊಬ್ಬರ ಕುಟುಂಬ ಸದಸ್ಯರೊಂದಿಗೆ ಸಿನಿಮಾ ತಾರೆಯರು ಸೇರಿ ಕ್ಯಾಸಿನೊದಲ್ಲಿ ಜೂಜಾಡಿದ್ದಾರೆ ಎಂಬ ಬಗ್ಗೆಯೂ ಜಾಲತಾಣಗಳಲ್ಲಿ ಚರ್ಚೆ ನಡೆದಿತ್ತು. ಈ ಸಂಬಂಧ ಇಡಿ ಉನ್ನತ ಅಧಿಕಾರಿಗಳನ್ನು ‘ಈಟಿವಿ ಭಾರತ’ ಸಂಪರ್ಕಿಸಿದಾಗ ನಾವು ಯಾರಿಗೂ ನೋಟಿಸ್ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಓದಿ: ಇದು ಕ್ಯಾಸಿನೊ ನಿರ್ವಾಹಕನ ತೋಟದ ಮನೆ ಅಲ್ಲ, ಸಣ್ಣ ಮೃಗಾಲಯ.. ಪ್ರವೀಣ್ ಸೇರಿ ಐವರಿಗೆ ಇಡಿ ನೋಟಿಸ್!