ಖುಷಿನಗರ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ಬೆಳಕಿಗೆ ಬಂದಿದೆ. 20 ವರ್ಷದ ಯುವತಿಯೊಬ್ಬಳ ಮೃತ ದೇಹವು ಚೀಲದಲ್ಲಿ ಕಟ್ಟಿ ಬಿಸಾಡಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಯುವತಿಯನ್ನು ಕುಟುಂಬಸ್ಥರೇ ಕೊಲೆ ಮಾಡಿ ಎಸೆದಿದ್ದಾರೆ ಎನ್ನಲಾಗುತ್ತಿದ್ದು, ಇದೊಂದು ಮರ್ಯಾದಾ ಹತ್ಯೆ ಎಂಬ ಶಂಕೆ ಕೂಡ ವ್ಯಕ್ತವಾಗಿದೆ.
ಇದನ್ನೂ ಓದಿ: ಆಯುರ್ವೇದಿಕ್ ಮೆಡಿಸಿನ್ ಓದುತ್ತಿದ್ದ ಮಗಳನ್ನು ಹತ್ಯೆ ಮಾಡಿದ ಕುಟುಂಬಸ್ಥರು
ಖುಷಿನಗರ ಜಿಲ್ಲೆಯ ಸೆವ್ರಾಹಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವತಿ ಕೊಲೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಅಂತೆಯೇ, ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು, ಯುವತಿಯ ಕುಟುಂಬ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಯುವತಿ ಸಾವನ್ನಪ್ಪಿರುವುದು ಖಚಿತವಾಗಿದೆ. ಅಲ್ಲದೇ, ಮೃತ ದೇಹವನ್ನು ಎಸೆದಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.
ಪ್ಲಾಸ್ಟಿಕ್ ಚೀಲದಲ್ಲಿ ಶವ ಪತ್ತೆ: ಅದರಂತೆ, ಸ್ಥಳ ಪರಿಶೀಲನೆ ನಡೆಸಿದಾಗ ಇಲ್ಲಿನ ನರ್ವಜೋತ್ ಅಣೆಕಟ್ಟಿನಿಂದ ಸುಮಾರು 300 ಮೀಟರ್ ದೂರದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಎಸೆದ ಸ್ಥಿತಿಯಲ್ಲಿ ಯುವತಿ ಶವ ಪತ್ತೆಯಾಗಿದೆ. ಈ ಶವ ಪತ್ತೆಯಾಗುತ್ತಿದ್ದಂತೆ ಇಡೀ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ. ಮತ್ತೊಂದೆಡೆ, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಎಲ್ಲ ದೃಷ್ಟಿಕೋನಗಳಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದರ ಭಾಗವಾಗಿ ಈಗಾಗಲೇ ಮೃತ ಯುವತಿಯ ತಂದೆ, ಚಿಕ್ಕಪ್ಪ ಮತ್ತು ಸಹೋದರನನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನೂ ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ಯುವತಿ ಶವವನ್ನು ಮರಣೋತ್ತರ ಪರೀಕ್ಷೆಗೂ ಒಳಪಡಿಸಿದ್ದಾರೆ. ಜೊತೆಗೆ ಕುಟುಂಬದ ಮಹಿಳೆಯರು ಹಾಗೂ ಇತರರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಲು ತೀರ್ಮಾನಿಸಿದ್ದಾರೆ.
ಯುವತಿ ಕೊಲೆಯಾದ ಮಾಹಿತಿ ತಕ್ಷಣವೇ ನಾವು ಕಾರ್ಯ ಪ್ರವೃತ್ತರಾಗಿ ಮೊದಲಿಗೆ ಕುಟುಂಬಸ್ಥರೊಬ್ಬರನ್ನು ವಿಚಾರಣೆ ನಡೆಸಿದ್ದೆವು. ಈ ವೇಳೆ ಸಿಕ್ಕ ಸುಳಿವಿನ ಆಧಾರದ ಮೇಲೆ ಎಎಸ್ಪಿ ರಿತೇಶ್ ಕುಮಾರ್ ಸಿಂಗ್ ನೇತೃತ್ವದಲ್ಲಿ ನರ್ವಜೋತ್ ಡ್ಯಾಂ ಬಳಿ ಸ್ಥಳ ಪರಿಶೀಲನೆ ಮಾಡಲಾಗಿತ್ತು. ಆಗ ಅಣೆಕಟ್ಟಿನ ನೀರಿನ ದಂಡೆಯಲ್ಲಿ ಚೀಲದಲ್ಲಿ ಕಟ್ಟಿ ಎಸೆದ ಮೃತದೇಹವು ಪತ್ತೆ ಸಿಕ್ಕಿತ್ತು. ಸದ್ಯ ಯುವತಿಯ ತಂದೆ ಸೇರಿ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ಸಂಜಯ್ ಕುಮಾರ್ ತಿಳಿಸಿದ್ದಾರೆ.
ಪ್ರೀತಿ ವಿಷಯವಾಗಿ ಕೊಲೆ?: ಇದೇ ವೇಳೆ ಗ್ರಾಮಸ್ಥರಿಂದ ಲಭ್ಯವಾದ ಪ್ರಕಾರ, ಯುವತಿಯು ಯುವಕನೊಬ್ಬನ್ನು ಪ್ರೀತಿಸುತ್ತಿದ್ದರು. ಈ ವಿಷಯ ತಿಳಿದಿದ್ದ ಕುಟುಂಬಸ್ಥರು ಆಕ್ರೋಶಗೊಂಡಿದ್ದರು. ಅಲ್ಲದೇ, ಮರ್ಯಾದೆ ವಿಷಯ ಎಂದು ಭಾವಿಸಿ ಕುಟುಂಬಸ್ಥರು ಯುವತಿಯನ್ನು ಕೊಲೆ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ.
ಇದನ್ನೂ ಓದಿ: ಗಂಗಾ ನದಿಯಲ್ಲಿ ಮುಳುಗಿದ ಐವರು ಎಂಬಿಬಿಎಸ್ ವಿದ್ಯಾರ್ಥಿಗಳು: ಇಬ್ಬರ ರಕ್ಷಣೆ, ಮೂವರ ಶವಗಳು ಪತ್ತೆ
ಇನ್ನು, ಕಳೆದ ತಿಂಗಳು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲೂ ಇಂತಹದ್ದೇ ಕೊಲೆ ನಡೆದಿತ್ತು. ಕುಟುಂಬದವರ ವಿರೋಧದ ನಡುವೆ ತಮ್ಮದೇ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದ 23 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಕುಟುಂಬಸ್ಥರು ಕೊಲೆ ಮಾಡಿದ್ದರು. ಅಲ್ಲದೇ, ಸಾಕ್ಷ್ಯ ನಾಶಪಡಿಸುವ ನಿಟ್ಟಿನಲ್ಲಿ ಚಿತಾಭಸ್ಮವನ್ನು ಬೇರೆಡೆ ಎಸೆಯಲಾಗಿತ್ತು. ಈ ಪ್ರಕರಣದಲ್ಲಿ ತಂದೆ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರ ಬಂಧಿಸಿದ್ದರು.