ಕೋಲ್ಕತ್ತಾ( ಪಶ್ಚಿಮಬಂಗಾಳ): ಕರೆನ್ಸಿ ನೋಟುಗಳ ಮೇಲೆ ಮಹಾತ್ಮ ಗಾಂಧಿ ಅವರ ಚಿತ್ರವನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಎಂದು ಬದಲಿಸಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಒತ್ತಾಯಿಸಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆ ರಾಷ್ಟ್ರಪಿತನಿಗಿಂತ ಏನೂ ಕಡಿಮೆಯಿಲ್ಲ ಎಂದು ಹಿಂದೂ ಮಹಾಸಭಾ ಹೇಳಿದೆ.
ಭಾರತ ಹಿಂದೂ ಮಹಾಸಭಾ ಆಯೋಜಿಸಿದ್ದ ದುರ್ಗಾ ಪೂಜೆ ಕಾರ್ಯಕ್ರಮದ ವೇಳೆ, ಮಹಾತ್ಮಾ ಗಾಂಧಿ ಅವರನ್ನು ಹೋಲುವ ಮಹಿಷಾಸುರ ವಿಗ್ರಹವನ್ನು ಪ್ರತಿಷ್ಠಾಪಿಸಿದ ಬಗ್ಗೆ ಆಕ್ರೋಶ ವ್ಯಕ್ತವಾದ ವಾರಗಳ ಬಳಿಕ ಮಹಾಸಭಾದಿಂದ ಈ ಬೇಡಿಕೆ ಬಂದಿದೆ.
ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿಯವರ ಕೊಡುಗೆ ಮಹಾತ್ಮ ಗಾಂಧಿಯವರಿಗಿಂತ ಏನೂ ಕಡಿಮೆಯಿಲ್ಲ ಎಂದು ನಾವು ಭಾವಿಸುತ್ತೇವೆ. ಆದ್ದರಿಂದ ಭಾರತದ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಅವರನ್ನು ಗೌರವಿಸಲು ಉತ್ತಮ ಮಾರ್ಗ ಎಂದರೆ ಅವರ ಚಿತ್ರವನ್ನು ಕರೆನ್ಸಿ ನೋಟುಗಳಲ್ಲಿ ಇಡುವುದೇ ಆಗಿದೆ. ಹೀಗಾಗಿ ಗಾಂಧೀಜಿ ಅವರ ಫೋಟೋ ಜಾಗದಲ್ಲಿ ನೇತಾಜಿಯವರೊಂದಿಗೆ ಬದಲಾಯಿಸಬೇಕು ಎಂದು ಭಾರತ ಹಿಂದೂ ಮಹಾಸಭಾ ರಾಜ್ಯ ಕಾರ್ಯಾಧ್ಯಕ್ಷ ಚಂದ್ರಚೂರ್ ಗೋಸ್ವಾಮಿ ಒತ್ತಾಯಿಸಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧೆ: ಮುಂದಿನ ವರ್ಷ ನಡೆಯಲಿರುವ ರಾಜ್ಯ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಭಾರತ ಹಿಂದೂ ಮಹಾಸಭಾ ಸಂಘಟನೆ ನಿರ್ಧರಿಸಿದೆ ಎಂದು ಅವರು ಇದೇ ವೇಳೆ ಘೋಷಿಸಿದರು. ಗೋಸ್ವಾಮಿ ಅವರ ಬೇಡಿಕೆಯು ಟಿಎಂಸಿ ಮತ್ತು ಕಾಂಗ್ರೆಸ್‌ನಿಂದ ಟೀಕೆಗೆ ಗುರಿಯಾಗಿದೆ. ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಒಡೆದಾಳುವ ರಾಜಕೀಯ ನೀತಿ ಅನುಸರಿಸುವುದನ್ನು ನಿಲ್ಲಿಸಬೇಕು ಎಂದು ಕಾಂಗ್ರೆಸ್ ಹೇಳಿದೆ.
ಪಶ್ಚಿಮ ಬಂಗಾಳದ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಅಧೀರ್ ಚೌಧರಿ ಮಾತನಾಡಿ, ದೇಶದ ಸ್ವಾತಂತ್ರ್ಯದಲ್ಲಿ ಗಾಂಧೀಜಿಯವರ ಪಾತ್ರ ನಿರ್ವಿವಾದ ಎಂದು ಹೇಳಿದ್ದು, ಮಹಾತ್ಮ ಗಾಂಧೀಜಿಯವರ ಹತ್ಯೆಯ ಹಿಂದೆ ಯಾರ ಕೈವಾಡವಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ ಎಂದು ಹಿಂದೂ ಮಹಾಸಭಾಗೆ ಟಾಂಗ್ ನೀಡಿದ್ದಾರೆ.
ಕಾಕತಾಳೀಯ: ಬೋಳು ತಲೆ ಹೊಂದಿದ್ದ ಮತ್ತು ಬಿಳಿ ಧೋತಿ ಮತ್ತು ದುಂಡಗಿನ ಕನ್ನಡಕವನ್ನು ಧರಿಸಿದ್ದ ಮಹಿಷಾಸುರ ವಿಗ್ರಹವು ಗಾಂಧಿಯನ್ನು ಹೋಲುತ್ತಿರುವುದು ಕಾಕತಾಳೀಯ ಎಂದು ಭಾರತ್ ಹಿಂದೂ ಮಹಾಸಭಾ ಹೇಳಿಕೊಂಡಿತ್ತು. ಗಾಂಧೀಜಿಯನ್ನು ಮಹಿಷಾಸುರ ಎಂದು ಬಿಂಬಿಸುವ ಉದ್ದೇಶ ನಮಗಿರಲಿಲ್ಲ. ಇದು ಉದ್ದೇಶಪೂರ್ವಕವಲ್ಲ. ಈ ವಿಚಾರದಲ್ಲಿ ವಿವಾದ ಸೃಷ್ಟಿಸಲು ಯತ್ನಿಸುತ್ತಿರುವವರು ಇದನ್ನು ಮಾಡುವುದರಿಂದ ದೂರವಿರಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಮಹಾಸಭಾ ಮನವಿ ಮಾಡಿತ್ತು.
ಇದನ್ನು ಓದಿ:ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ: ಶಾಲೆಯ ಮಾನ್ಯತೆ ರದ್ದುಪಡಿಸಿದ ತೆಲಂಗಾಣ ಸರ್ಕಾರ