ಶಿಮ್ಲಾ : ಹಿಮಾಚಲ ಪ್ರದೇಶದಲ್ಲಿ ಜೋರು ಮಳೆ ಸುರಿಯುತ್ತಿದ್ದು ಪ್ರವಾಹದಲ್ಲಿ ಈವರೆಗೆ ಆರು ಜನರು ಸಾವನ್ನಪ್ಪಿದ್ದಾರೆ. ಸುಮಾರು 10 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಧಾರಾಕಾರ ಮಳೆಯಿಂದಾಗಿ ರಾಜ್ಯದ ಹಲವು ಸ್ಥಳಗಳಲ್ಲಿ ಭೂಕುಸಿತ ಮತ್ತು ಪ್ರವಾಹ ಉಂಟಾಗಿದೆ. ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ಮೈಲುಗಳಷ್ಟು ದೂರ ಟ್ರಾಫಿಕ್ ಜಾಮ್‌ಗೆ ಕಾರಣವಾಗಿದೆ.
"ಮಳೆಯಿಂದ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಎರಡು ರಾಷ್ಟ್ರೀಯ ಹೆದ್ದಾರಿಗಳನ್ನು ಒಳಗೊಂಡಂತೆ 124 ರಸ್ತೆಗಳು ಹಾನಿಗೊಳಗಾಗಿವೆ. ಒಟ್ಟು 303 ಪ್ರಾಣಿಗಳು ಸಾವನ್ನಪ್ಪಿವೆ. ಸಂಪೂರ್ಣ ವರದಿ ನಿರೀಕ್ಷಿಸಲಾಗುತ್ತಿದೆ'' ಎಂದು ಹಿಮಾಚಲ ಪ್ರದೇಶದ ವಿಪತ್ತು ನಿರ್ವಹಣೆಯ ಪ್ರಧಾನ ಕಾರ್ಯದರ್ಶಿ ಓಂಕಾರ್ ಚಂದ್ ಶರ್ಮಾ ತಿಳಿಸಿದ್ದಾರೆ.
ಮಳೆಯಿಂದಾಗಿ ಚಂಡೀಗಢ- ಮನಾಲಿ ಹೆದ್ದಾರಿಯಲ್ಲಿ ಪ್ರವಾಹ ಮತ್ತು ಭೂಕುಸಿತಗಳು ಉಂಟಾಗಿ ಮಂಡಿ- ಕುಲು ನಡುವಿನ ರಸ್ತೆಯನ್ನು ನಿರ್ಬಂಧಿಸಲಾಗಿದೆ. ಇದಾದ ನಂತರ ನೂರಾರು ಪ್ರಯಾಣಿಕರು ರಸ್ತೆಯಲ್ಲೇ ಸಿಲುಕಿ ಪರದಾಡಿದ್ದಾರೆ. ಭೂಕುಸಿತದಿಂದಾಗಿ ಚಂಡೀಗಢ- ಮನಾಲಿ ಹೆದ್ದಾರಿಯಲ್ಲಿ ಸುಮಾರು 7 ಮೈಲುಗಳಷ್ಟು ದೂರ ವಾಹನಗಳು ನಿಂತಿದ್ದ ಉದ್ದನೆಯ ಸಾಲು ಕಂಡುಬಂತು.
ಇಲ್ಲಿನ ಪಾಂಡೋಕುಲ್ಲು ವಲಯದ ಆಟ್ ಬಳಿಯ ಖೋಟಿನಲ್ಲಾದಲ್ಲಿ ಪ್ರವಾಹ ಉಂಟಾಗಿದ್ದು ಭಾನುವಾರ ಸಂಜೆಯಿಂದಲೇ ಪ್ರಯಾಣಿಕರು ಪರದಾಡಿದ್ದಾರೆ. ಇಲ್ಲಿ ಪುನಃಸ್ಥಾಪನೆ ಕಾರ್ಯಗಳು ಭರದಿಂದ ಸಾಗಿವೆ. ರಸ್ತೆಗಳನ್ನು ತಡೆಯುತ್ತಿರುವ ದೊಡ್ಡ ದೊಡ್ಡ ಬಂಡೆಗಳನ್ನು ಸ್ಫೋಟಿಸಲು ಸ್ಫೋಟಕಗಳನ್ನು ಬಳಸಲಾಗುತ್ತಿದೆ ಎಂದು ಮಂಡಿ ಆಡಳಿತಾಧಿಕಾರಿಗಳು ಹೇಳಿದ್ದಾರೆ.
"ಪಂಡೋ- ಮಂಡಿ ಬಳಿ ನಡೆಯುತ್ತಿರುವ ಗುಡ್ಡ ಕಡಿಯುವ ಕಾಮಗಾರಿಯಿಂದಾಗಿ ಭೂಕುಸಿತ ಸಂಭವಿಸಿ ರಸ್ತೆಗಳು ಬ್ಲಾಕ್ ಆಗಿವೆ. ನಿರಂತರ ಮಣ್ಣು ಮತ್ತು ಕಲ್ಲುಗಳು ಕುಸಿಯುತ್ತಿದ್ದು ಕಳೆದ ರಾತ್ರಿ ರಸ್ತೆ ತೆರವು ಕಾರ್ಯ ನಿಲ್ಲಿಸಬೇಕಾಯಿತು. ಇಂದು ಬೆಳಿಗ್ಗೆ ಕೆಲಸವನ್ನು ಪುನರಾರಂಭಿಸಲಾಯಿತು. ಆದರೆ ರಸ್ತೆ ತೆರವುಗೊಳಿಸಲು ಕನಿಷ್ಠ 4 ಗಂಟೆ ಬೇಕು. ಪ್ರಶಾರ್ ಬಳಿ ಮೇಘಸ್ಫೋಟದಿಂದಾಗಿ ಸುಮಾರು 40 ಸಣ್ಣ ಕಾರುಗಳು ಮತ್ತು 55 ವಿದ್ಯಾರ್ಥಿಗಳನ್ನು ಹೊತ್ತ ಬಸ್ಸು ಸಿಲುಕಿಕೊಂಡಿದೆ. ಮುಂದಿನ ಎರಡು ದಿನಗಳವರೆಗೆ ಹವಾಮಾನ ಇಲಾಖೆಯಿಂದ ಭಾರಿ ಮಳೆ ಎಚ್ಚರಿಕೆ ಇದೆ. ಮಂಡಿ- ಜೋಗಿಂದರ್ ನಗರ ಹೆದ್ದಾರಿಯನ್ನು ತೆರವುಗೊಳಿಸಲಾಗಿದೆ'' ಎಂದು ಮಂಡಿ ಎಎಸ್ಪಿ ಸಾಗರ್ ಚಂದರ್ ಮಾಹಿತಿ ನೀಡಿದರು.
ಮಂಡಿಗೆ ತೆರಳದಂತೆ ಸೂಚನೆ: ಚಂಡೀಗಢವನ್ನು ಮನಾಲಿಯೊಂದಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ- 21 ಏಳು-ಎಂಟು ಗಂಟೆಗಳಲ್ಲಿ ಸಂಚಾರಕ್ಕೆ ಮತ್ತೆ ತೆರೆಯುವ ನಿರೀಕ್ಷೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ರಸ್ತೆ ತೆರೆಯುವವರೆಗೆ ಮಂಡಿ ಕಡೆಗೆ ತೆರಳದಂತೆಯೂ ಪ್ರಯಾಣಿಕರಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. "ನಾವು ನಿನ್ನೆ ಸಂಜೆಯಿಂದ ಟ್ರಾಫಿಕ್ ಜಾಮ್‌ಗೆ ಕಾರಣವಾಗುವ ರಸ್ತೆಯನ್ನು ಮುಚ್ಚಿದ್ದು, ಹೆಚ್ಚಿನ ಸಂಖ್ಯೆಯ ವಾಹನಗಳು ಆರು ಮೈಲಿ ದೂರ ರಸ್ತೆಗಳ ಎರಡೂ ಬದಿಗಳಲ್ಲಿ ಸಿಕ್ಕಿಹಾಕಿಕೊಂಡಿವೆ" ಎಂದು ಪ್ರಯಾಣಿಕರಲ್ಲಿ ಒಬ್ಬರಾದ ಪ್ರಶಾಂತ್ ಹೇಳಿದರು.
ಕಾಂಗ್ರಾ, ಮಂಡಿ ಮತ್ತು ಸಿರ್ಮೌರ್ ಜಿಲ್ಲೆಗಳ ಹಲವಾರು ಭಾಗಗಳಲ್ಲಿ ಜಡಿಮಳೆಯಾಗಿದೆ. ಕಂಗ್ರಾದ ಧರ್ಮಶಾಲಾದಲ್ಲಿ 106.6 ಮಿಮೀ, ಕತೌಲಾ 74.5 ಮಿಮೀ, ಗೋಹರ್ 67 ಮಿಮೀ, ಮಂಡಿ 56.4 ಮಿಮೀ, ಪೋಂಟಾ ಸಾಹಿಬ್ 43 ಮಿಮೀ ಮತ್ತು ಪಾಲಂಪುರ್ 32.2 ಮಿಮೀ ಮಳೆಯಾಗಿದೆ. ಜೂನ್ 27 ಮತ್ತು 28 ರಂದು ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆ ಮತ್ತು ಜೂನ್ 27-29 ರವರೆಗೆ ಗುಡುಗುಸಹಿತ ಮಳೆಯಾಗುವ ಬಗ್ಗೆ ಸ್ಥಳೀಯ ಹವಾಮಾನ ಕಚೇರಿ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: 62 ವರ್ಷಗಳಲ್ಲಿ ಇದೇ ಮೊದಲು.. ಮುಂಬೈ ಮತ್ತು ದೆಹಲಿಗೆ ಒಟ್ಟಿಗೆ ಲಗ್ಗೆಯಿಟ್ಟ 'Monsoon'