ತಿನ್ಸುಕಿಯಾ(ಅಸ್ಸಾಂ): ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡುತ್ತಿರುವುದೇ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಲು ಕಾರಣ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ರಾಮೇಶ್ವರ ತೇಲಿ ತಿಳಿಸಿದ್ದಾರೆ.
ಅಸ್ಸಾಂ ತಿನ್ಸುಕಿಯಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ವಿಧಿಸಿರುವ ತೆರಿಗೆಯನ್ನು ಕೋವಿಡ್ ವ್ಯಾಕ್ಸಿನ್ಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ ಎಂದರು.
ಪೆಟ್ರೋಲ್ ಬೆಲೆ 40 ರೂಪಾಯಿ ಇದ್ದು, ಅಸ್ಸಾಂ ಸರ್ಕಾರ 28 ರೂಪಾಯಿ ವ್ಯಾಟ್ ತೆರಿಗೆ ವಿಧಿಸಿದೆ. ಕೇಂದ್ರ ಪೆಟ್ರೋಲಿಯಂ ಸಚಿವಾಲಯ 30 ರೂಪಾಯಿ ತೆರಿಗೆ ಹಾಕುತ್ತದೆ. ಈ ಎಲ್ಲಾ ತೆರಿಗೆಗಳ ಕಾರಣದಿಂದ ಅಸ್ಸಾಂನಲ್ಲಿ ಪೆಟ್ರೋಲ್ ಬೆಲೆ 98 ರೂಪಾಯಿಗೆ ಏರಿಕೆಯಾಗಿದೆ.
'ನೀರಿನ ಬೆಲೆಯೇ ಹೆಚ್ಚು'
ಪೆಟ್ರೋಲ್ ಬೆಲೆ ಹೆಚ್ಚಾಗಿಲ್ಲ. ತೆರಿಗೆ ಹಾಕುವ ಮೂಲಕ ಅವುಗಳ ಬೆಲೆಯನ್ನು ಹೆಚ್ಚು ಮಾಡಲಾಗಿದೆ. ಕುಡಿಯುವ ನೀರಿನ ಬಾಟಲಿ ಬೆಲೆಯ ಮೇಲೆ ಹಾಕುವ ತೆರಿಗೆ ಪೆಟ್ರೋಲ್ ಉತ್ಪನ್ನಗಳ ಮೇಲಿನ ತೆರಿಗೆಗಿಂತ ಹೆಚ್ಚಿದೆ ಎಂದಿದ್ದಾರೆ.
ಒಂದು ವೇಳೆ ನೀವು 'ಹಿಮಾಲಯನ್ ವಾಟರ್' ನೀರಿನ ಬಾಟಲಿ ಖರೀದಿಸಿದರೆ ಅದರ ಬೆಲೆ ನೂರು ರೂಪಾಯಿ ಇರುತ್ತದೆ. ನೀರು ದುಬಾರಿಯೇ ವಿನಃ ಪೆಟ್ರೋಲ್ ಅಲ್ಲ. ನೀವು ಉಚಿತವಾಗಿ ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳುತ್ತೀರಿ. ಅದಕ್ಕೆ ಹಣ ಎಲ್ಲಿಂದ ಬರುತ್ತದೆ?. ಈ ರೀತಿಯ ತೆರಿಗೆ ವಿಧಿಸುವ ಮೂಲಕ ಹಣ ಸಂಗ್ರಹ ಮಾಡಲಾಗುತ್ತದೆ ಎಂದು ರಾಮೇಶ್ವರ ತೇಲಿ ಹೇಳಿದ್ದಾರೆ.
ರಾಜಸ್ಥಾನ ತೈಲ ಬೆಲೆಯ ಮೇಲೆ ಅತ್ಯಂತ ಹೆಚ್ಚು ವ್ಯಾಟ್ ವಿಧಿಸುತ್ತಿದೆ. ಅದು ಬೇಕಾದರೆ ತನ್ನ ಅಧಿಕಾರ ಬಳಸಿ, ತಾನು ವಿಧಿಸುವ ವ್ಯಾಟ್ ಕಡಿಮೆ ಮಾಡಿ, ಬೆಲೆಯನ್ನೂ ಕಡಿಮೆ ಮಾಡಿಕೊಳ್ಳಬಹುದು ಎಂದು ಕೇಂದ್ರ ಸಚಿವರು ಸಲಹೆ ನೀಡಿದ್ದಾರೆ.
ಸದ್ಯಕ್ಕೆ ಅಸ್ಸಾಂ ರಾಜ್ಯ ಪೆಟ್ರೋಲ್ ಮೇಲೆ ಶೇಕಡಾ 32.66ರಷ್ಟು ವ್ಯಾಟ್ ವಿಧಿಸುತ್ತಿದ್ದು, ರಾಜಸ್ಥಾನ ಸರ್ಕಾರ ಶೇಕಡಾ 36ರಷ್ಟು ವ್ಯಾಟ್ ಅನ್ನು ವಿಧಿಸುತ್ತಿದೆ.
ಇದನ್ನೂ ಓದಿ: ಕಲ್ಲಿದ್ದಲು ಕೊರತೆ: ಆರ್ಟಿಪಿಎಸ್ನ ಐದು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ