ಅಯೋಧ್ಯೆ(ಉತ್ತರಪ್ರದೇಶ): ಹಿಜಾಬ್ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ವೇಳೆ 'ಜೈ ಶ್ರೀರಾಮ್' ಎಂದು ಘೋಷಣೆ ಕೂಗುತ್ತಿದ್ದ ವಿದ್ಯಾರ್ಥಿಗಳ ಗುಂಪಿನ ವಿರುದ್ಧ 'ಅಲ್ಲಾಹು ಅಕ್ಬರ್' ಎಂದು ಕೂಗಿದ ಮಂಡ್ಯದ ಯುವತಿಗೆ ಮುಸ್ಲಿಂ ರಾಷ್ಟ್ರೀಯ ಮಂಚ್(ಎಂಆರ್ಎಂ) ಬೆಂಬಲ ವ್ಯಕ್ತಪಡಿಸಿದೆ. ಅಲ್ಲದೇ, ಪರ್ದಾ ಪದ್ಧತಿ ಭಾರತದ ಸಂಸ್ಕೃತಿಯಾಗಿದೆ ಎಂದಿದೆ.
ಮಂಡ್ಯದ ಯುವತಿ ನಮ್ಮ(ಮುಸ್ಲಿಂ) ಸಮುದಾಯದ ಮಗಳಾಗಿದ್ದಾಳೆ. ಅವಳ ವಿರುದ್ಧ ಉದ್ರಿಕ್ತರ ಗುಂಪೊಂದು ಭಯಭೀತಗೊಳಿಸಲು ಯತ್ನಿಸಿದೆ. ಮುಸ್ಲಿಂ ರಾಷ್ಟ್ರೀಯ ಮಂಚ್ ಆ ಯುವತಿಯ ಬೆಂಬಲವಾಗಿ ನಿಲ್ಲಲಿದೆ ಎಂದು ಪ್ರಾಂತ್ ಸಂಚಾಲಕ ಅನಿಲ್ ಸಿಂಗ್ ತಿಳಿಸಿದ್ದಾರೆ.
ಹಿಂದು ಸಂಸ್ಕೃತಿ ಮಹಿಳೆಯನ್ನು ಗೌರವಿಸುವುದನ್ನು ಕಲಿಸುತ್ತದೆ. ಆದರೆ, ಮಂಡ್ಯದ ಕಾಲೇಜೊಂದರಲ್ಲಿ ನಡೆದ ಘಟನೆ ಇದಕ್ಕೆ ವಿರುದ್ಧವಾಗಿದೆ. ಯುವತಿ ಹಿಜಬ್ ಧರಿಸಿ ಕಾಲೇಜಿಗೆ ಬಂದಾಗ ಅವಳನ್ನು ಬೆದರಿಸುವ ಯತ್ನ ನಡೆದಿದೆ. ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸಲು ಸಂವಿಧಾನದಲ್ಲಿಯೇ ಅವಕಾಶ ನೀಡಲಾಗಿದೆ ಎಂದಿದ್ದಾರೆ.
ಒಂದು ವೇಳೆ ಆ ಯುವತಿ ಶಾಲಾ ಸಂಸ್ಥೆಯ ನೀತಿಗಳಿಗೆ ವಿರುದ್ಧವಾಗಿ ನಡೆದಿದ್ದರೆ ಕ್ರಮ ಕೈಗೊಳ್ಳಬಹುದಿತ್ತು. ಪ್ರತಿಭಟನಾನಿರತ ವಿದ್ಯಾರ್ಥಿಗಳ ಗುಂಪು ಆ ಯುವತಿಯ್ನು ಕಂಡು ಜೈ ಶ್ರೀರಾಮ್ ಎಂದು ಕೂಗಿದಾಗ ಆಕೆ ಅಲ್ಲಾ ಹು ಅಕ್ಬರ್ ಎಂದು ಕೂಗಿದ್ದಾಳೆ. ಇದು ಕೋಮು ಸಾಮರಸ್ಯ ಕದಡುವುದಲ್ಲ. ಬದಲಾಗಿ ಪ್ರತಿಭಟನಾ ವಿದ್ಯಾರ್ಥಿಗಳು ಹಿಂದು ಮತ್ತು ಭಾರತದ ಸಂಸ್ಕೃತಿಯ ವಿರುದ್ಧ ನಡೆದುಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.
ಹಿಜಾಬ್ ಧರಿಸುವುದರ ವಿರುದ್ಧ ಮಂಡ್ಯದ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ಭಾರಿ ಪ್ರತಿಭಟನೆ ನಡೆಸುತ್ತಿದ್ದಾಗ ಮುಸ್ಲಿಂ ಯುವತಿಯೊಬ್ಬಳು ಏಕಾಂಗಿಯಾಗಿ ಆಗಮಿಸಿದಾಗ ಅವಳ ಬಳಿಗೆ ಬಂದ ಕೇಸರಿ ಶಾಲು ಧಾರಿ ವಿದ್ಯಾರ್ಥಿಗಳು ಜೈ ಶ್ರೀರಾಮ್ ಎಂದು ಕೂಗಿದ್ದರು. ಈ ವೇಳೆ ಯುವತಿ ಅಲ್ಲಾಹು ಅಕ್ಬರ್ ಎಂದು ಕೂಗಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಓದಿ: ಮಂಡ್ಯದಲ್ಲಿ ಘೋಷಣೆ ಕೂಗಿದ ವಿದ್ಯಾರ್ಥಿನಿಗೆ ಬಹುಮಾನ ನೀಡಿದ ಮುಸ್ಲಿಂ ಸಂಘಟನೆ ವಿರುದ್ಧ ದೂರು