ದೋಹಾ: 2022 ರ ಫಿಫಾ ವಿಶ್ವಕಪ್‌ನಲ್ಲಿ ಪ್ರತಿ ಪಂದ್ಯಕ್ಕೂ ಮೊದಲು ಆಟಕ್ಕಾಗಿ ಬಳಸಲಾಗುವ ಚೆಂಡುಗಳನ್ನು ಚಾರ್ಜ್ ಮಾಡಲಾಗುತ್ತದೆ ಎಂಬ ವಿಚಾರ ನಿಮಗೆ ಗೊತ್ತಿಲ್ಲದೆ ಇರಬಹುದು. ಆದರೆ, ಇದು ಸತ್ಯ. ಸದ್ಯ ಕತಾರ್‌ನಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ 2022 ರಲ್ಲಿ ಬಳಸಲಾಗುತ್ತಿರುವ ಚೆಂಡುಗಳಲ್ಲಿ ಹೈಟೆಕ್ ಸೆನ್ಸರ್‌ಗಳನ್ನು ಅಳವಡಿಸಲಾಗಿದ್ದು, ಇವುಗಳ ಮೂಲಕ ಆಟಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಅನುಕೂಲವಾಗಿದೆ. ಹೀಗಾಗಿ ಚೆಂಡುಗಳಲ್ಲಿರುವ ಈ ಸೆನ್ಸರ್‌ಗಳನ್ನು ಪಂದ್ಯದ ಮೊದಲು ಚಾರ್ಜ್ ಮಾಡಬೇಕಾಗುತ್ತದೆ.
ಈ ಸೆನ್ಸರ್ಗಳು ಸಣ್ಣ ಬ್ಯಾಟರಿಯಿಂದ ಚಾಲಿತವಾಗಿವೆ ಎಂದು ಹೇಳಲಾಗುತ್ತಿದೆ. ಈ ಬ್ಯಾಟರಿಯು ಒಂದು ಬಾರಿ ಚಾರ್ಜ್ ಮಾಡಿದ ನಂತರ ಆರು ಗಂಟೆಗಳ ಕಾಲ ಸಕ್ರಿಯವಾಗಿರುತ್ತದೆ ಎಂದು ಅಡಿಡಾಸ್ ಹೇಳಿದೆ. ಅಲ್ಲದೇ, ಇದನ್ನು ಬಳಸದಿದ್ದರೆ ಇದು 18 ದಿನಗಳವರೆಗೆ ಚಾರ್ಜ್ ಉಳಿಸಿ ಕೊಂಡಿರುತ್ತದೆ.
ಹೈಟೆಕ್ ಸೆನ್ಸರ್ ಹೊಂದಿರುವ ಫುಟ್ಬಾಲ್ ನಲ್ಲಿ ಅಳವಡಿಸಲಾಗಿರುವ ಸೆನ್ಸರ್ ತೂಕ ಕೇವಲ 14 ಗ್ರಾಂ. ಬಾಲ್ ಟ್ರ್ಯಾಕಿಂಗ್ ಗಾಗಿ ಈ ಸೆನ್ಸರ್ ತುಂಬಾ ಅನುಕೂಲಕರವಾಗಿದೆ. ಇದು ಪಿಚ್‌ನ ಸುತ್ತಲೂ ಇರಿಸಲಾಗಿರುವ ಕ್ಯಾಮೆರಾಗಳ ಜೊತೆಗೆ ಆಫ್‌ಸೈಡ್‌ಗಳು ಮತ್ತು ಇತರ ಪ್ರಶ್ನಾರ್ಹ ನಿರ್ಧಾರಗಳನ್ನು ಗುರುತಿಸಲು ರೆಫರಿಗೆ ಸಹಾಯ ಮಾಡುತ್ತದೆ.
ಮಾಹಿತಿಯ ಪ್ರಕಾರ, ಯಾವುದೇ ಚೆಂಡನ್ನು ಒದ್ದಾಗ ಅಥವಾ ತಲೆಯಿಂದ ಹೊಡೆದಾಗ ಅಥವಾ ಕೈಯಿಂದ ಎಸೆದ ತಕ್ಷಣ ಈ ಸೆನ್ಸರ್ ವ್ಯವಸ್ಥೆಯು ಸೆಕೆಂಡಿಗೆ 500 ಫ್ರೇಮ್‌ಗಳ ಮಾಹಿತಿಯನ್ನು ಸಂಗ್ರಹಿಸುತ್ತದೆ. ನಂತರ ಈ ಡೇಟಾವನ್ನು ಸೆನ್ಸರ್ಗಳಿಂದ ಲೋಕಲ್ ಪೊಸಿಶನಿಂಗ್ ಸಿಸ್ಟಮ್ಗೆ ಕಳುಹಿಸಲಾಗುತ್ತದೆ. ಇದಕ್ಕಾಗಿ ಆಟದ ಮೈದಾನದ ಸುತ್ತಲೂ ಸ್ಥಾಪಿಸಲಾದ ನೆಟ್‌ವರ್ಕ್ ಆಂಟೆನಾ ಸೆಟಪ್ ಸಹಾಯ ಮಾಡುತ್ತದೆ. ಇದು ತಕ್ಷಣದ ಬಳಕೆಗಾಗಿ ಎಲ್ಲ ಡೇಟಾವನ್ನು ತೆಗೆದುಕೊಳ್ಳುತ್ತದೆ ಮತ್ತು ಅದನ್ನು ಸಂಗ್ರಹಿಸಿ ಆಟದಲ್ಲಿ ಬಳಸುತ್ತದೆ.
ಹೈಟೆಕ್ ಸೆನ್ಸರ್ ಹೊಂದಿರುವ ಫುಟ್‌ಬಾಲ್ ಆಟದ ಸಮಯದಲ್ಲಿ ಬೌಂಡರಿಯಿಂದ ಹೊರಗೆ ಹಾರಿಹೋದಾಗ ಮತ್ತು ಅದನ್ನು ಬದಲಿಸಲು ಹೊಸ ಚೆಂಡನ್ನು ಮೈದಾನಕ್ಕೆ ಎಸೆದಾಗ, KINEXON ನ ಬ್ಯಾಕೆಂಡ್ ಸಿಸ್ಟಮ್ ನಿಂದ ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆಯೇ ಹೊಸ ಚೆಂಡಿಗೆ ಡೇಟಾ ಇನ್‌ಪುಟ್ ಅನ್ನು ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸುತ್ತದೆ.
ಇದನ್ನೂ ಓದಿ: ಫಿಫಾ ಫ್ಯಾನ್ ಫೆಸ್ಟ್‌ನಲ್ಲಿ ಬಾಲಿವುಡ್ ನಟಿ ನೋರಾ ಫತೇಹಿ ರಂಗು