ನವದೆಹಲಿ: ಸ್ವಾತಂತ್ರ್ಯ ಅಮೃತ ಮಹೋತ್ಸವದ ದಿನವಾದ ಆಗಸ್ಟ್ 15 ರಂದು ಪ್ರಧಾನಿ ನರೇಂದ್ರ ಮೋದಿ ದೆಹಲಿ ಕೆಂಪುಕೋಟೆಯ ಮೇಲೆ ಧ್ವಜಾರೋಹಣ ಮಾಡಲಿದ್ದು, ಅಂದು ನಡೆಯುವ ಕಾರ್ಯಕ್ರಮಕ್ಕಾಗಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕೆಂಪುಕೋಟೆಯ ಸುತ್ತಮುತ್ತ 1 ಸಾವಿರಕ್ಕೂ ಅಧಿಕ ಇಂಟರ್ನೆಟ್ ಪ್ರೋಟೋಕಾಲ್ ಆಧರಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
75ನೇ ಸ್ವಾತಂತ್ರ್ಯ ದಿನಾಚರಣೆಗೆ ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗಳಿಂದ ಸಂಭವನೀಯ ದಾಳಿ ಬೆದರಿಕೆಯ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಜಪಾನ್‌ನಲ್ಲಿ ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಮಾದರಿಯಂತೆ ದಾಳಿ ನಡೆಯುವ ಬಗ್ಗೆ ಸಂಚು ರೂಪಿಸಲಾಗಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಹೀಗಾಗಿ ಕಟ್ಟುನಿಟ್ಟಾದ ಪ್ರವೇಶ ನಿಯಮಗಳನ್ನು ಜಾರಿಗೊಳಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಲಾಗಿದೆ.
ಕೋಟೆಯ ಸುತ್ತಲೂ ಐಪಿ ಆಧರಿತ 2 ಮೆಗಾಪಿಕ್ಸೆಲ್‌ನ ಶೇ.80 ರಷ್ಟು ಸಿಸಿಟಿವಿ ಕ್ಯಾಮೆರಾಗಳು ಮತ್ತು 4 ಮೆಗಾಪಿಕ್ಸಲ್ನ ಶೇ.20 ಸಿಸಿಟಿವಿಗಳನ್ನು ಪ್ರತಿ ಮೂಲೆಯಲ್ಲಿ ಇಡಲಾಗುವುದು. 4 ಮೆಗಾಪಿಕ್ಸೆಲ್‌ನ ಕ್ಯಾಮೆರಾಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಭದ್ರತೆಗೆ ಇಡಲಾಗುತ್ತಿದೆ.
ಕಳೆದ ವರ್ಷ ಗಣರಾಜ್ಯೋತ್ಸವದಂದು ರೈತ ಹೋರಾಟದ ಪ್ರತಿಭಟನಾಕಾರರು ಕೆಂಪುಕೋಟೆಗೆ ಮುತ್ತಿಗೆ ಹಾಕಿ, ಅಳವಡಿಸಲಾಗಿದ್ದ ಬ್ಯಾರಿಕೇಡ್ಗಳನ್ನು ಮುರಿದಿದ್ದರು. ಅಲ್ಲದೇ, ರಾಷ್ಟ್ರಧ್ವಜವನ್ನು ಹಾರಿಸುವ ಜಾಗದಲ್ಲಿ ಪಂಜಾಬ್ ಪ್ರತ್ಯೇಕ ಬಾವುಟವನ್ನು ಹಾರಿಸಿದ ಘಟನೆ ಭಾರೀ ಸುದ್ದಿಯಾಗಿತ್ತು.