ತಿರುವನಂತಪುರಂ (ಕೇರಳ): ಕೇರಳದಾದ್ಯಂತ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆ ಇಲ್ಲಿನ 10 ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ )ರೆಡ್ ಅಲರ್ಟ್ ಘೋಷಿಸಿದೆ. ಇಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಅವಾಂತರಗಳು ಸೃಷ್ಟಿಯಾಗಿದ್ದು, ಈ ವರೆಗೆ 12 ಸಾವು ಸಂಭವಿಸಿದೆ ಎಂದು ವರದಿಯಾಗಿದೆ. ಅಲ್ಲದೇ ಹಲವು ಕಡೆಗಳಲ್ಲಿ ಭೂಕುಸಿತಗಳು, ಅಣೆಕಟ್ಟುಗಳ ನೀರಿನ ಮಟ್ಟ ಏರಿಕೆ ಕಂಡಿದ್ದು , ರಾಜ್ಯದ ವಿವಿಧ ಭಾಗಗಳಲ್ಲಿ ಸಾವಿರಾರು ಜನರನ್ನು ನಿರಾಶ್ರಿತ ಶಿಬಿರಗಳಿಗೆ ಸ್ಥಳಾಂತರಗೊಳಿಸಲಾಗಿದೆ.
ಐಎಂಡಿ ಯು ಆ. 2 ಮತ್ತು 3 ರಂದು ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ ಮತ್ತು ಕಾಸರಗೋಡು ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಜೊತೆಗೆ ರಾಜ್ಯದಲ್ಲಿ ಆಗಸ್ಟ್ 5 ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಭಾರಿ ಮಳೆಯ ಹಿನ್ನೆಲೆ ರಾಜ್ಯ ಸರ್ಕಾರವು ಕೇರಳದಾದ್ಯಂತ 95 ನಿರಾಶ್ರಿತ ಶಿಬಿರಗಳನ್ನು ತೆರೆದಿದ್ದು, ಈ ವರೆಗೆ ಸುಮಾರು 2,291 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದೆ.
ಭಾರಿ ಮಳೆಯಿಂದಾಗಿ ಜುಲೈ 31 ರಿಂದ ಇಲ್ಲಿಯವರೆಗೆ ಸುಮಾರು 126 ಮನೆಗಳಿಗೆ ಹಾನಿಯಾಗಿದ್ದು,ಇದರಲ್ಲಿ 27 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. ಐಎಂಡಿ ಹೊರಡಿಸಿದ ರೆಡ್ ಅಲರ್ಟ್ ಮತ್ತು ರಾಜ್ಯದಲ್ಲಿ 200 ಮಿ.ಮೀ.ಗೂ ಅಧಿಕ ಮಳೆಯಾಗುವ ಸಾಧ್ಯತೆ ಇದ್ದು, ಈ ಎಚ್ಚರಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ನದಿ ಪಾತ್ರದ ಜನರಿಗೆ ಎಚ್ಚರಿಕೆ : ಪಂಪಾ, ಮಣಿಮಾಲಾ ಮತ್ತು ನೆಯ್ಯರ್ ಸೇರಿದಂತೆ ಹಲವು ನದಿಗಳ ನೀರಿನ ಮಟ್ಟವು ಅಪಾಯದ ಮಟ್ಟವನ್ನು ಮೀರಿದ್ದು, ಈ ಬಗ್ಗೆ ಬಗ್ಗೆ ಕೇಂದ್ರ ಜಲ ಆಯೋಗವು ಎಚ್ಚರಿಕೆ ನೀಡಿದೆ ಎಂದು ಮುಖ್ಯಮಂತ್ರಿ ವಿಜಯನ್ ಹೇಳಿದರು.
ಅಚ್ಚನ್‌ಕೋವಿಲ್, ಕಲಿಯಾರ್, ತೊಡುಪುಳ ಮತ್ತು ಮೀನಚಿಲ್ ನದಿಗಳ ನೀರಿನ ಮಟ್ಟವು ಏರಿಕೆಯಾಗುತ್ತಿದ್ದು, ನದಿಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಜೊತೆಗೆ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ.ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಕ್ಕೆ ಎನ್ಡಿಆರ್ಎಫ್ ಮತ್ತುಎಸ್ ಆರ್ಎಫ್ ನ್ನು ನೇಮಿಸಲಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಓದಿ : ಆಂಧ್ರದ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆ: 150ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳು ಅಸ್ವಸ್ಥ