ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನ ಉಕ್ಕಡಂ ಪ್ರದೇಶದ ಪ್ರಕಾಶಂ ರಸ್ತೆ ಬಳಿ ಸುಡಾನ್ ಪ್ರಜೆಯೊಬ್ಬ ಚಲಾಯಿಸುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಕಾನ್ಸ್ಟೇಬಲ್ ಸಾವನ್ನಪ್ಪಿದ್ದರು. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದಾಗ ನಕಲಿ ಆಧಾರ್ ಕಾರ್ಡ್ ಪ್ರಿಂಟಿಂಗ್ ದಂಧೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಪೆಷಲ್ ಬ್ರಾಂಚ್ ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್‌ಮೆಂಟ್ (ಎಸ್‌ಬಿ-ಸಿಐಡಿ)ಯಲ್ಲಿ ನಿಯೋಜಿತವಾಗಿರುವ ಹೆಡ್ ಕಾನ್ಸ್ಟೇಬಲ್ ಮಾರಿಮುತ್ತುಎಂಬುವವರು ಗುರುವಾರ ರಾತ್ರಿ ತನ್ನ ಸ್ನೇಹಿತನೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಸೂಡಾನ್ ಪ್ರಜೆ ಸುಖೈಬ್ ಎಂಬಾತನ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ.
ಹೆಡ್ ಕಾನ್ಸ್ಟೇಬಲ್ ಮಾರಿಮುತ್ತು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದರೆ, ಸ್ಕೂಟರ್ ಸವಾರಿ ಮಾಡುತ್ತಿದ್ದ ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಹೇಳಲಾಗಿದೆ. ಅಪಘಾತದ ನಂತರ ಪ್ರಕರಣದ ತನಿಖೆಯ ಮಧ್ಯೆ, ಆರೋಪಿ ಸೂಡಾನ್ ಪ್ರಜೆ ಭಾರತೀಯ ಪ್ರಜೆ ಎಂದು ಗುರುತಿಸುವ ನಕಲಿ ಆಧಾರ್ ಕಾರ್ಡ್ ಅನ್ನು ಹೊಂದಿದ್ದ ಎಂದು ಕೊಯಮತ್ತೂರು ಪೊಲೀಸರು ತಿಳಿಸಿದ್ದಾರೆ.
ಈ ವಿಚಾರ ಪೊಲೀಸ್ ಇಲಾಖೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ದೆಹಲಿಯ ತೆರೇಸಾ ಕಾಲೇಜಿನಲ್ಲಿ ಓದುತ್ತಿರುವ ಸೂಡಾನ್ ವಿದ್ಯಾರ್ಥಿ ಸುಖೈಬ್, ತಾನು ಭಾರತೀಯ ಪ್ರಜೆ ಎಂದು ಸೂಚಿಸುವ ಆಧಾರ್ ಕಾರ್ಡ್ ಅನ್ನು ನೀಡಿದ್ದ. ಅವನ ಗುರುತು ಮತ್ತು ದಾಖಲೆಗಳ ದೃಢೀಕರಣದ ಬಗ್ಗೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ನಕಲಿ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ ಆರು ಮಂದಿ ಬಂಧನ
ಹೆಚ್ಚಿನ ವಿಚಾರಣೆಯಲ್ಲಿ ಸುಖೈಬ್ ಬೋಟನೂರ್ ಪ್ರದೇಶದಲ್ಲಿ ನೆಲೆಸಿರುವ ತನ್ನ ಸ್ನೇಹಿತರಾದ ಸುರಕ್ ಮತ್ತು ಇಬ್ರಾಹಿಂ ಅವರೊಂದಿಗೆ ಸಮಯ ಕಳೆಯಲು ಒಂದು ತಿಂಗಳ ಹಿಂದೆ ಕೊಯಮತ್ತೂರಿಗೆ ಭೇಟಿ ನೀಡಿದ್ದ ಎಂದು ತಿಳಿದು ಬಂದಿದೆ. ನಕಲಿ ಆಧಾರ್ ಕಾರ್ಡ್‌ನ ದಂಧೆ ವಿಚಾರವಾಗಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ನಕಲಿ ದಾಖಲೆಯ ಮೂಲವನ್ನು ಮತ್ತು ಅದರ ಸಂಗ್ರಹಣೆಯಲ್ಲಿ ಭಾಗಿಯಾಗಿರುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
"ಇದು ಗಂಭೀರವಾದ ವಿಷಯವಾಗಿದ್ದು, ಸಂಪೂರ್ಣ ತನಿಖೆಯ ಅಗತ್ಯವಿದೆ" ಎಂದು ಉಪ ಪೊಲೀಸ್ ಆಯುಕ್ತೆ ಅನಿತಾ ವೇಣುಗೋಪಾಲ್ ಹೇಳಿದ್ದಾರೆ. ನಕಲಿ ಆಧಾರ್ ಕಾರ್ಡ್‌ನ ಹಿಂದಿನ ಸತ್ಯವನ್ನು ಬಹಿರಂಗಪಡಿಸಲು ಮತ್ತು ದುರಂತ ಅಪಘಾತಕ್ಕೆ ಕಾರಣವಾದ ಅಂಶಗಳನ್ನು ನಿರ್ಧರಿಸಲು ನಾವು ಬದ್ಧರಾಗಿದ್ದೇವೆ. ಈ ಘಟನೆಯು ಗುರುತಿನ ಪರಿಶೀಲನಾ ವ್ಯವಸ್ಥೆಗಳ ಸಮಗ್ರತೆ ಮತ್ತು ಸುರಕ್ಷತೆಯ ಬಗ್ಗೆ ಕಳವಳವನ್ನು ಉಂಟುಮಾಡಿದೆ. ಮೋಸದ ಚಟುವಟಿಕೆಗಳಿಂದ ರಕ್ಷಿಸಲು ಸೂಕ್ತ ಪ್ರೋಟೋಕಾಲ್‌ಗಳನ್ನು ಜಾರಿಗೆ ತರಲು ಅಧಿಕಾರಿಗಳನ್ನು ಅವರು ಒತ್ತಾಯಿಸಿದ್ದಾರೆ.
ತನಿಖೆ ಮುಂದುವರೆದಿದೆ. ಮೃತ ಹೆಡ್ ಕಾನ್ಸ್ಟೇಬಲ್ ಮಾರಿಮುತ್ತು ಮತ್ತು ಅವರ ದುಃಖಿತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಬದ್ಧರಾಗಿದ್ದೇವೆ. ಅವರ ಸಮರ್ಪಿತ ಸೇವೆಯನ್ನು ಗುರುತಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತೆ ಅನಿತಾ ವೇಣುಗೋಪಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: ನಕಲಿ ಆಧಾರ್ ಕಾರ್ಡ್ ಬಳಸಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಗೆ ತರಾಟೆ