ಮುಂಬೈ(ಮಹಾರಾಷ್ಟ್ರ): ಟ್ರೂಕಾಲರ್ ಮೊಬೈಲ್ ಅಪ್ಲಿಕೇಶನ್ ದೇಶದ ಕಾನೂನು ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ಬಳಕೆದಾರರ ಮಾಹಿತಿಯನ್ನು ಹಂಚಿಕೊಂಡಿದೆ ಎಂದು ಆರೋಪಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ನಡೆಸಿದೆ.
ಶಶಾಂಕ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ.ಎಸ್.ಕುಲಕರ್ಣಿ ಅವರಿದ್ದ ಪೀಠವು ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರಗಳಿಗೆ ನೋಟಿಸ್ ನೀಡಿದೆ.
ಟ್ರೂಕಾಲರ್ ಮೊಬೈಲ್ ಅಪ್ಲಿಕೇಶನ್ ಎಲ್ಲಾ ಬಳಕೆದಾರರ ಮಾಹಿತಿಯನ್ನು ಮಾಹಿತಿದಾರರ ಒಪ್ಪಿಗೆಯಿಲ್ಲದೇ ಬೇರೊಬ್ಬರ ಜೊತೆ ಹಂಚಿಕೊಳ್ಳುತ್ತದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಟ್ರೂ ಕಾಲರ್ನಿಂದ ಪ್ರಯೋಜನ ಪಡೆಯುವ ಪಾಲುದಾರರು ಯಾರು ಎಂದು ನ್ಯಾಯಾಲಯ ಪ್ರಶ್ನಿಸಿದಾಗ, ಗೂಗಲ್ ಇಂಡಿಯಾ, ಭಾರತಿ ಏರ್ಟೆಲ್, ಐಸಿಐಸಿಐ ಬ್ಯಾಂಕ್ ಎಂದು ಅರ್ಜಿದಾರರು ಉತ್ತರಿಸಿದ್ದಾರೆ.
ಇದನ್ನೂ ಓದಿ: 35ನೇ ವಯಸ್ಸಿಗೆ ಕೇಂದ್ರ ಸಚಿವ ಸ್ಥಾನ! ಶಾಲಾ ಶಿಕ್ಷಕನಾಗಿ ಸಂಸದನಾದ ಯುವಕನಿಗೆ ಮೋದಿ ಮಣೆ
ಹಲವಾರು ಸಾಲ ಒದಗಿಸುವ ಕಂಪನಿಗಳು ಕಂಪನಿಗಳು ಈ ಟ್ರೂಕಾಲರ್ ಆ್ಯಪ್ನಿಂದ ಮಾಹಿತಿ ಸೋರಿಕೆಯ ಪ್ರಯೋಜನಗಳನ್ನು ಪಡೆಯುತ್ತಿವೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರ, ಮಹಾರಾಷ್ಟ್ರ ಸರ್ಕಾರ, ರಾಜ್ಯದ ಐಟಿ ಇಲಾಖೆ, ಟ್ರೂಕಾಲರ್ ಇಂಟರ್ನ್ಯಾಷನಲ್ ಎಲ್‌ಎಲ್‌ಪಿ, ಐಸಿಐಸಿಐ ಬ್ಯಾಂಕ್, ಮತ್ತು ಯುಪಿಐಗಳನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿಸಿದ್ದಾರೆ.
ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಕೇಂದ್ರ ಸರ್ಕಾರ, ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಮೂರು ವಾರಗಳಲ್ಲಿ ಉತ್ತರ ನೀಡುವಂತೆ ಸೂಚನೆ ನೀಡಿದೆ.