ನವದೆಹಲಿ: ಫೆಬ್ರವರಿ 2020 ರ ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ನೀಡುವ ಕುರಿತು ಹೈಕೋರ್ಟ್ ಆದೇಶವು ಕೇಂದ್ರದ ಟೀಕೆಗೆ ಗುರಿಯಾಗಿದೆ. ಈ ಗಲಭೆ 53 ಜನರನ್ನು ಬಲಿ ತೆಗೆದುಕೊಂಡಿದ್ದರೆ, 700 ಮಂದಿ ಗಾಯಗೊಂಡಿದ್ದರು.
ದೆಹಲಿ ಪೊಲೀಸರ ಪರ ವಕೀಲ ರಜತ್ ನಾಯರ್ ಹಾಗೂ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದರು. ಈ ವೇಳೆ ತಮ್ಮ ವಾದ ಮಂಡನೆ ಮಾಡಿದ ಮೆಹ್ತಾ, ಹೈಕೋರ್ಟ್‌ನ ತೀರ್ಪನ್ನು ದೇಶಾದ್ಯಂತ ಅನ್ವಯಿಸಿದರೆ, ಬಾಂಬ್ ಹಾಕಿದ ವ್ಯಕ್ತಿಯೂ ಸಹ ಅಂತಿಮವಾಗಿ ನಿಷ್ಕ್ರಿಯಗೊಳ್ಳುತ್ತಾನೆ. ಅಷ್ಟೇ ಅಲ್ಲ ಆತ ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳುತ್ತಾನೆ ಎಂಬ ಅಂಶವನ್ನು ನ್ಯಾಯಮೂರ್ತಿಗಳ ಗಮನಕ್ಕೆ ತಂದರು.
ಹೈಕೋರ್ಟ್ ತೀರ್ಪು ಕಾನೂನು ಬದ್ಧವಾದರೆ, ಈ ಹಿಂದೆ ಭಾರತದ ಪ್ರಧಾನ ಮಂತ್ರಿಯ ಮೇಲೆ ಹಲ್ಲೆ ನಡೆಸಿ ಬಾಂಬ್ ದಾಳಿ ನಡೆಸಿದ ವ್ಯಕ್ತಿಗಳೂ ಸಹ ಭಯೋತ್ಪಾದಕರಾಗಿ ಉಳಿಯುವುದಿಲ್ಲ. ದೆಹಲಿ ಹೈಕೋರ್ಟ್‌ನ ವ್ಯಾಖ್ಯಾನವು ಅಪಾಯಕಾರಿ ಪೂರ್ವನಿದರ್ಶನಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದರು.
ಈ ನಡುವೆ ಆರೋಪಿಗಳ ಪರ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಉನ್ನತ ನ್ಯಾಯಾಲಯವು ನೋಟಿಸ್ ನೀಡಿ ಸಮಸ್ಯೆಯನ್ನು ಪರಿಶೀಲಿಸಬಹುದು ಎಂಬ ಬಗ್ಗೆ ಕೋರ್ಟ್ ಗಮನ ಸೆಳೆದರು. ವಾದಿಗಳು ಹಾಗೂ ಪ್ರತಿವಾದಿಗಳನ್ನು ಆಲಿಸಿದ ಕೋರ್ಟ್ ದೆಹಲಿ ಹೈಕೋರ್ಟ್‌ನ ಆದೇಶವನ್ನು ದೇಶದ ಯಾವುದೇ ನ್ಯಾಯಾಲಯವು ಅವಲಂಬಿಸಬಾರದು ಎಂದು ಅಭಿಪ್ರಾಯಪಟ್ಟಿತು.
ಮೂವರು ವಿದ್ಯಾರ್ಥಿ - ಕಾರ್ಯಕರ್ತರಾದ ನತಾಶಾ ನರ್ವಾಲ್, ದೇವಂಗಾನಾ ಕಲಿತಾ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರಿಗೆ ಜಾಮೀನು ನೀಡುವ ಹೈಕೋರ್ಟ್ ನಿರ್ಧಾರವನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಿದೆ. ಇದೇ ವೇಳೆ, ಮೂವರಿಗೆ ಜಾಮೀನು ನೀಡಿರುವ ಈ ಹಂತದಲ್ಲಿ ತಾನೂ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸುಪ್ರೀಂ ಹೇಳಿದೆ.