ನೆಲ್ಲೂರು(ಆಂಧ್ರಪ್ರದೇಶ): ಸಂಸ್ಥಾಪನಾ ದಿನ, ವರ್ಷಾಚರಣೆಗಳ ವೇಳೆ ಕಂಪನಿಗಳು, ಸಂಸ್ಥೆಗಳು ಕೊಡುಗೆ ಘೋಷಿಸುವುದು ಸಹಜ. ಅದೇ ರೀತಿ ಇಲ್ಲೊಂದು ಸಣ್ಣ ಚಿಕನ್ ಅಂಗಡಿ ತನ್ನ 12 ವರ್ಷದ ಸಂಭ್ರಮಾಚರಣೆಗೆ ವಿನೂತನವಾದ ಆಫರ್ ನೀಡಿದೆ. ಅದೇನೆಂದರೆ ಚಲಾವಣೆಯಲ್ಲಿಲ್ಲದ ಹಳೆಯ 5 ಪೈಸೆ ನಾಣ್ಯಕ್ಕೆ ಅರ್ಧ ಕೇಜಿ ಚಿಕನ್ ನೀಡುವುದಾಗಿ ಘೋಷಣೆ ಮಾಡಿದೆ. ಕೆಲ ಜನರು ತಮ್ಮ ಬಳಿಯಿದ್ದ ಹಳೆಯ ನಾಣ್ಯವನ್ನು ಹೆಕ್ಕಿ ತೆಗೆದು ಚಿಕನ್ ಪಡೆದಿದ್ದಾರೆ.
ಈ ವಿಚಿತ್ರ ಕೊಡುಗೆ ನೀಡಿದ್ದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಆತ್ಮಕೂರು ಪಟ್ಟಣದ 786 ಚಿಕನ್ ಅಂಗಡಿ. ಜನರು ಈ ಬಂಪರ್ ಆಫರ್ ಕೇಳಿದ್ದೇ ತಡ 5 ಪೈಸೆ ಹಳೆಯ ನಾಣ್ಯವನ್ನು ಹಿಡಿದುಕೊಂಡು ಬಂದು ಸಾಲಿನಲ್ಲಿ ನಿಂತು ಖರೀದಿ ಮಾಡಿದರು. ಆ ಊರಿನವರೊಂದೇ ಅಲ್ಲ ಸುತ್ತಮುತ್ತಲಿನ ಊರಿನವರೂ ಕೂಡ ಹಣ ಹಿಡಿದುಕೊಂಡು ಬಂದು ಚಿಕನ್ ಪಡೆದಿದ್ದಾರೆ.
ಹಳೆಯ ಹಣವೇ ಏಕೆ: 786 ಚಿಕನ್ ಅಂಗಡಿಯವರು ಹಲವೆಡೆ ಶಾಖೆಗಳನ್ನು ಹೊಂದಿದ್ದು, ಈಚೆಗಷ್ಟೇ ಊರಿನ ವಾಟರ್ ಪ್ಲಾಂಟ್ ಬಳಿ ಹೊಸ ಶಾಖೆಯನ್ನು ಆರಂಭಿಸಿದ್ದರು. ಇದೇ ವೇಳೆ ಅಂಗಡಿ ಆರಂಭಗೊಂಡು 12 ವರ್ಷ ಸಂದಿಸಿದ್ದು, ಇದರ ನೆನಪಿಗಾಗಿ ಜನರಿಗೆ ಕೊಡುಗೆ ಘೋಷಿಸಿತ್ತು. ಅದರಂತೆ ಹಳೆಯ ನಾಣ್ಯಗಳನ್ನು ತಂದಲ್ಲಿ ಅರ್ಧ ಕೆಜಿ ಚಿಕನ್ ನೀಡಲಾಗುವುದು ಎಂದು ಜಾಹೀರಾತು ನೀಡಿತ್ತು.
ಹಳೆಯ ನಾಣ್ಯಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಮತ್ತು ಅವುಗಳನ್ನು ಶೇಖರಣೆ ಮಾಡುವ ಉದ್ದೇಶದಿಂದಾಗಿ ಈ ರೀತಿಯ ವಿಶೇಷ ಕೊಡುಗೆಯನ್ನು ಅಂಗಡಿ ಘೋಷಣೆ ಮಾಡಿದೆ. ಜನರು ಚಲಾವಣೆಯಲ್ಲಿಲ್ಲದ ಹಣವನ್ನು ಬಿಸಾಡುತ್ತಾರೆ. ಆದರೆ, ಅವು ನಮ್ಮ ಪರಂಪರೆಯ ಪ್ರತೀಕ, ಪುರಾತನ ನಾಣ್ಯಗಳ ಮೌಲ್ಯವನ್ನು ತೋರಿಸಲು ಮತ್ತು ಜನರಿಗೆ ಅದನ್ನು ಮನವರಿಕೆ ಮಾಡಲು ಉಳಿದ ನಾಣ್ಯಗಳನ್ನು ಶೇಖರಣೆ ಮಾಡಲಿ ಎಂಬ ಕಾರಣಕ್ಕಾಗಿ ಈ ಕೊಡುಗೆಯನ್ನು ನೀಡಲಾಗಿತ್ತು ಎಂದು ಅಂಗಡಿಯವರು ತಿಳಿಸಿದ್ದಾರೆ.
ಭಾನುವಾರ ಬೆಳಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ ಮಾತ್ರ ಈ ಆಫರ್ ನೀಡಲಾಗಿತ್ತು. ಐದು ಪೈಸೆಯ ನಾಣ್ಯಗಳೊಂದಿಗೆ ಅನೇಕರು ಅಂಗಡಿಗೆ ಬಂದರು. ಅವರು ಐದು ಪೈಸೆಯ ನಾಣ್ಯಗಳ ದರದಲ್ಲಿ ಅರ್ಧ ಕೆಜಿ ಕೋಳಿಯನ್ನು ಪಡೆದರು ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ: ಐದು ಪೈಸೆಗೆ 1/2 ಕೆಜಿ ಚಿಕನ್ ಎಂದು ಬರೆದ ಒಕ್ಕಣೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗಿತ್ತು. ಆತ್ಮಕೂರು ಮಾತ್ರವಲ್ಲದೇ, ಅಕ್ಕಪಕ್ಕದ ಹಳ್ಳಿಗಳ ಜನರೂ ನಾಣ್ಯವನ್ನು ಹಿಡಿದುಕೊಂಡು ಬಂದು ಚಿಕನ್ ಖರೀದಿ ಮಾಡಿದ್ದಾರೆ. ಅಂಗಡಿ ಮಾಲೀಕರ ಯೋಚನೆ ಏನೇ ಇರಲಿ, ಈ ಕೊಡುಗೆಯಿಂದ ಕೇವಲ 5 ಪೈಸೆಗೆ ಅರ್ಧ ಕೆಜಿ ಚಿಕನ್ ಸಿಕ್ಕಿದ್ದರಿಂದ ಜನ ಮಾತ್ರ ಖುಷಿಯಿಂದ ಚಿಕನ್ ತೆಗೆದುಕೊಂಡು ಹೋಗಿದ್ದಾರೆ.
ಸುಮಾರು ಹನ್ನೆರಡು ವರ್ಷಗಳಿಂದ 786 ಕೋಳಿಮಾಂಸದ ಅಂಗಡಿಯನ್ನು ನಡೆಸುತ್ತಿದ್ದೇವೆ. ಹೊಸದಾಗಿ ನಾವು ಇನ್ನೊಂದು ಶಾಖೆಯನ್ನು ತೆರೆದಿದ್ದೇವೆ. ಪ್ರತಿ ವರ್ಷ ನಾವು ಗ್ರಾಹಕರಿಗೆ ಏನಾದರೊಂದು ಕೊಡುಗೆ ನೀಡುತ್ತೇವೆ. ಈಗಿನ ಅಂಗಡಿ 12 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಭಾನುವಾರದಂದು ಐದು ಪೈಸೆಗೆ ಅರ್ಧ ಕೆಜಿ ಚಿಕನ್ ಅನ್ನು ನೀಡಲು ನಿರ್ಧರಿಸಿದ್ದೆವು. ಅನೇಕ ಗ್ರಾಹಕರು ಇದಕ್ಕೆ ಉತ್ತಮ ಪ್ರತಿಕ್ರಿಯೆ ನೀಡಿದರು. ನಾಣ್ಯ ತೆಗೆದುಕೊಂಡು ಬಂದು ಚಿಕನ್ ಪಡೆದರು. ಪ್ರತಿ ಭಾನುವಾರವೂ ಈ ರೀತಿಯ ಆಫರ್ ನೀಡುತ್ತೇವೆ ಎಂದು ಕೋಳಿ ಅಂಗಡಿಯ ವ್ಯವಸ್ಥಾಪಕ ಶಫಿ ಹೇಳಿದರು.
ಓದಿ: ಪತ್ನಿ ಕುಟುಂಬದ ಬಗ್ಗೆ ಕಾಳಜಿ ವಹಿಸುತ್ತಿಲ್ಲ: ಪೊಲೀಸ್ ಠಾಣೆ ಮೆಟ್ಟಿಲೇರಿದ ನೊಂದ ಪತಿ