ಶ್ರೀನಗರ(ಜಮ್ಮು ಕಾಶ್ಮೀರ): ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಉಜ್ರಾಮ್ ಪತ್ರಿ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕನೊಬ್ಬನನ್ನು ಬೇಟೆಯಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಮಧ್ಯರಾತ್ರಿ ವೇಳೆಗೆ ಪುಲ್ವಾಮಾದ ರಾಜ್ಪೋರಾ ಗ್ರಾಮದ ಉಜ್ರಾಮ್ ಪತ್ರಿ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ಪ್ರಾರಂಭವಾಗಿತ್ತು. ಬೆಳಗ್ಗೆ ವೇಳೆಗೆ ಹಿಜ್ಬುಲ್ ಸಂಘಟನೆಗೆ ಸೇರಿದ ಫೆರೂಜ್ ಅಹ್ಮದ್ ಎಂಬ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ನಿಖರ ಮಾಹಿತಿಯ ಆಧಾರದ ಮೇಲೆ, ಜಮ್ಮು ಕಾಶ್ಮೀರ ಪೊಲೀಸ್, ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್ಪಿಎಫ್ನ ಜಂಟಿ ತಂಡವು ಉಜ್ರಾಮ್ ಪತ್ರಿ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಭದ್ರತಾ ಪಡೆಗಳ ತಂಡವು ಸ್ಥಳಕ್ಕೆ ಸಮೀಪಿಸಿದ ತಕ್ಷಣ, ಅಡಗಿಕೊಂಡಿದ್ದ ಉಗ್ರರು ಗುಂಡು ಹಾರಿಸಿದ್ದಾರೆ. ಈ ವೇಳೆ ಭದ್ರತಾ ಪಡೆಗಳು ಸಹ ಪ್ರತಿದಾಳಿ ನಡೆಸಿವೆ.
ಎರಡು ದಿನಗಳ ಹಿಂದೆ ಪೊಲೀಸರು ಪ್ರಯಾಣಿಸುತ್ತಿದ್ದ ಬಸ್ಸಿನ ಮೇಲೆ ಉಗ್ರಗಾಮಿಗಳು ಮನಬಂದಂತೆ ಗುಂಡು ಹಾರಿಸಿ, ಮೂವರು ಪೊಲೀಸರು ಹುತಾತ್ಮರಾಗಿದ್ದ ಝೆವಾನ್ ಪ್ರದೇಶದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿ ಈ ಗುಂಡಿನ ಚಕಮಕಿ ನಡೆದಿದೆ.
ಇದನ್ನೂ ಓದಿ:ಮುಂದ್ರಾ ಬಂದರಿನಲ್ಲಿ ಡ್ರಗ್ಸ್ ಪತ್ತೆ ಪ್ರಕರಣ: ಅಮೆರಿಕ, ಇರಾನ್, ಆಫ್ಘನ್ಗೆ ಪತ್ರ ಬರೆಯಲಿರುವ ಎನ್ಐಎ