ಅಹಮದಾಬಾದ್ : ಮೋದಿ ಉಪನಾಮೆ ಕುರಿತು ವಿವಾದಾತ್ಮಕ ಹೇಳಿಕೆ ಕುರಿತಾದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಹಿನ್ನಡೆಯಾಗಿದೆ. ಸೆಷನ್ಸ್ ನ್ಯಾಯಾಲಯ ನೀಡಿರುವ ಶಿಕ್ಷೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ಗುಜರಾತ್ ಹೈಕೋರ್ಟ್ ವಜಾಗೊಳಿಸಿತು. ಹೀಗಾಗಿ, ಸಂಸದ ಸ್ಥಾನದ ಅನರ್ಹತೆ ಮತ್ತು ಶಿಕ್ಷೆ ಮುಂದುವರೆದಿದೆ.
ಗುಜರಾತ್ ಹೈಕೋರ್ಟ್ನಲ್ಲಿಂದು ನ್ಯಾಯಮೂರ್ತಿ ಹೇಮಂತ್ ಪ್ರಚ್ಚಕ್ ಅವರು ರಾಹುಲ್ ಅರ್ಜಿ ವಜಾಗೊಳಿಸಿದರು. ಈ ವಿಚಾರಣೆಯ ಬಳಿಕ ರಾಹುಲ್ ಗಾಂಧಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದ್ದು, ಶಿಕ್ಷೆಯನ್ನು ಯಥಾಸ್ಥಿತಿಯಲ್ಲಿ ಇರಿಸಲಾಗಿದೆ. ರಾಹುಲ್ ಪರ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪು ಪ್ರಶ್ನಿಸುವ ಸಾಧ್ಯತೆ ಹೆಚ್ಚಿದೆ.
"ಕೆಳ ಹಂತದ ನ್ಯಾಯಾಲಯದ ತೀರ್ಪು ಸರಿಯಾಗಿದೆ. ಇದರಲ್ಲಿ ಮಧ್ಯಪ್ರವೇಶಿಸುವುದು ಸೂಕ್ತವಲ್ಲ" ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು. ಹೀಗಾಗಿ, ಮೋದಿ ಉಪನಾಮೆ ಹೇಳಿಕೆಯ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಗೆ ಗುಜರಾತ್ ಹೈಕೋರ್ಟ್‌ನಿಂದ ದೊಡ್ಡ ಹಿನ್ನಡೆಯಾಗಿದೆ.
ಸಂಸತ್ ಸದಸ್ಯತ್ವ ರದ್ದು ವಿಚಾರ : ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವವನ್ನು ಲೋಕಸಭೆ ಸಚಿವಾಲಯವು ಪ್ರಜಾಪ್ರತಿನಿಧಿ ಕಾಯ್ದೆಯಡಿ ಈಗಾಗಲೇ ರದ್ದುಗೊಳಿಸಿದೆ. ರಾಹುಲ್ ಕೇರಳದ ವಯನಾಡಿನ ಸಂಸದರಾಗಿದ್ದರು. ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ, ಜನಪ್ರತಿನಿಧಿ ಮತ್ತು ಶಾಸಕರಿಗೆ ಪ್ರಕರಣದಲ್ಲಿ 2 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆ ವಿಧಿಸಿದರೆ, ಅವರ ಸದಸ್ಯತ್ವವನ್ನು (ಸಂಸತ್ ಮತ್ತು ವಿಧಾನಸಭೆಯಿಂದ) ಹಿಂಪಡೆಯಲಾಗುತ್ತದೆ. ಅಷ್ಟೇ ಅಲ್ಲದೇ, ಶಿಕ್ಷೆ ಮುಗಿದ 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗುತ್ತಾರೆ.
ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ : ಇನ್ನು, ಪ್ರಕರಣದ ಕುರಿತು ಕೆಳ ನ್ಯಾಯಾಲಯದ ತೀರ್ಪಿನ ವಿರುದ್ಧ ಏಪ್ರಿಲ್ 2ರಂದು ರಾಹುಲ್ ಗಾಂಧಿ ಸೂರತ್ನ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ರಾಹುಲ್ ಎರಡು ಅರ್ಜಿಗಳನ್ನು ಸಲ್ಲಿಸಿದ್ದರು. ಮೊದಲ ಅರ್ಜಿಯಲ್ಲಿ ಶಿಕ್ಷೆಗೆ ತಡೆ ನೀಡುವಂತೆ ಕೋರಿದರೆ, ಎರಡನೇ ಅರ್ಜಿಯು ಮೇಲ್ಮನವಿಯ ವಿಲೇವಾರಿ ಬಾಕಿ ಉಳಿದಿರುವ ಶಿಕ್ಷೆಗೆ ತಡೆ ನೀಡುವಂತೆ ಕೋರಿದ್ದರು.
ಇದನ್ನೂ ಓದಿ : ಮೋದಿ ಉಪನಾಮೆ ಪ್ರಕರಣ : ಇಂದು ರಾಹುಲ್ ಮೇಲ್ಮನವಿ ಅರ್ಜಿ ತೀರ್ಪು ಪ್ರಕಟಿಸಲಿರುವ ಗುಜರಾತ್ ಹೈಕೋರ್ಟ್
ಸುಪ್ರೀಂ ಕೋರ್ಟ್‌ಗೆ ಕದ ತಟ್ಟಲು ಅವಕಾಶ : ರಾಹುಲ್ಗೆ ಹೈಕೋರ್ಟ್‌ನಿಂದ ಪರಿಹಾರ ಸಿಕ್ಕಿಲ್ಲ. ಆದಾಗ್ಯೂ, ಅವರು ಸುಪ್ರೀಂ ಕೋರ್ಟ್‌ಗೆ ಹೋಗುವ ಆಯ್ಕೆ ಇನ್ನೂ ಮುಕ್ತವಾಗಿದೆ. ಸುಪ್ರೀಂ ಕೋರ್ಟ್ ರಾಹುಲ್ ಅವರ ಶಿಕ್ಷೆಗೆ ತಡೆ ನೀಡಿದರೆ, ಅವರ ಸದಸ್ಯತ್ವವನ್ನು ಮರು ಪಡೆದುಕೊಳ್ಳಬಹುದು.
ಪ್ರಕರಣದ ಹಿನ್ನೆಲೆ ಹೀಗಿದೆ.. : ಏಪ್ರಿಲ್ 13, 2019ರಲ್ಲಿ ಕರ್ನಾಟಕದ ಕೋಲಾರದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ ಉಪನಾಮೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. "ಎಲ್ಲ ಕಳ್ಳರು ಮೋದಿ ಎಂಬ ಸಾಮಾನ್ಯ ಉಪನಾಮೆ ಹೊಂದಿದ್ದಾರೆ" ಎಂದು ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಸೂರತ್ ಪಶ್ಚಿಮ ಕ್ಷೇತ್ರದ ಶಾಸಕ ಪೂರ್ಣೇಶ್ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಹಾಗೆಯೇ, ರಾಜ್ಯಸಭಾ ಸಂಸದ ಸುಶೀಲ್ ಕುಮಾರ್ ಮೋದಿ ಕೂಡ ಕೇಸ್ಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ್ದಾರೆ.