ಚಂಡೀಗಢ (ಪಂಜಾಬ್): ಕೆಲ ಹೊತ್ತಿನಲ್ಲೇ ಹಸೆಮಣೆ ಏರಬೇಕಿದ್ದ ಯುವಕನೋರ್ವ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಘಟನೆ ಪಂಜಾಬ್ನ ಮೋಗಾ ಜಿಲ್ಲೆಯಲ್ಲಿ ನಡೆದಿದೆ. ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕಾಗಿ ವರನೊಂದಿಗೆ ಸಂಬಂಧಿಕರು ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಇದರಲ್ಲಿ ಓರ್ವ ಬಾಲಕಿ ಸೇರಿ ಇತರ ಇಬ್ಬರು ಕೂಡ ಮೃತಪಟ್ಟಿದ್ದಾರೆ.
ಇಲ್ಲಿನ ಫಾಜಿಲ್ಕಾ ನಿವಾಸಿಯಾದ ಸುಖ್ವಿಂದರ್ ಸಿಂಗ್, ಕಾರು ಚಾಲಕ ಅಂಗ್ರೇಜ್ ಸಿಂಗ್ ಹಾಗೂ ನಾಲ್ಕು ವರ್ಷದ ಬಾಲಕಿ ಮೃತರು ಎಂದು ಗುರುತಿಸಲಾಗಿದೆ. ಲೂಧಿಯಾನದ ಬಡೋವಾಲ್ ಎಂಬಲ್ಲಿ 21 ಜೋಡಿಗಳಿಗೆ ಸಾಮೂಹಿಕ ವಿವಾಹ ಸಮಾರಂಭ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಭಾನುವಾರ ಬೆಳಗಿನ ಜಾವ ವರ ಸೇರಿದಂತೆ ಹಲವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ರಸ್ತೆ ಬದಿ ನಿಂತಿದ್ದ ಟ್ರಾಲಿಗೆ ಕಾರು ಕಾರು ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ವರ ಸುಖ್ವಿಂದರ್ ಸಿಂಗ್ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಅಲ್ಲದೇ, ಇತರ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗ್ಗೆ ದಟ್ಟವಾದ ಮಂಜಿನಿಂದಾಗಿ ಕಾರಿನ ಚಾಲಕ ನಿಲ್ಲಿಸಿದ್ದ ಟ್ರಾಲಿಗೆ ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ವರ ಹಾಗೂ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾಲಕ ಅಂಗ್ರೇಜ್ ಸಿಂಗ್ ಸೇರಿದಂತೆ ನಾಲ್ವರು ಗಂಭೀರ ಗಾಯಗೊಂಡಿದ್ದರು. ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ನಂತರ ಆಂಬ್ಯುಲೆನ್ಸ್ನಲ್ಲಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ, ಅಲ್ಲಿಂದ ನಂತರ ಚಿಕಿತ್ಸೆಗಾಗಿ ಫರೀದ್‌ಕೋಟ್‌ಗೆ ಕಳುಹಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಚಾಲಕ ಮೃತಪಟ್ಟಿದ್ದಾನೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಅಪಘಾತದಲ್ಲಿ ವರ ಸೇರಿ ನಾಲ್ವರು ಸಾವನ್ನಪ್ಪಿದ ನಂತರ ಈ ಸುದ್ದಿ ತಿಳಿದ ತಕ್ಷಣ ಲೂಧಿಯಾನದಲ್ಲಿ ಶೋಕ ಆವರಿಸಿತ್ತು. ಮದುವೆಗೆ ಸಿದ್ಧತೆಗಾಗಿ ಕೆಲ ಕುಟುಂಬಸ್ಥರು ಮೊದಲೇ ಲೂಧಿಯಾನಕ್ಕೆ ತಲುಪಿದ್ದರು. ಸಂಭ್ರಮದಲ್ಲಿ ವಧುವಿನ ಕುಟುಂಬ ಸಹ ಅಲ್ಲಿಗೆ ಬಂದು ಸೇರಿತ್ತು. ಆದರೆ, ಆಘಾತಕಾರಿ ವಿಷಯ ಕೇಳಿ ವರನ ಕುಟುಂಬದವರು ಜಲಾಲಾಬಾದ್‌ನಲ್ಲಿರುವ ತಮ್ಮ ಮನೆಗೆ ಮರಳಿದ್ದಾರೆ. ಅಲ್ಲದೇ, ವಧುವಿನ ಇಡೀ ಕುಟುಂಬ ಆಘಾತಕ್ಕೊಳಗಾಗಿದೆ. ಎರಡೂ ಕುಟುಂಬಗಳ ಸದಸ್ಯರು ಕೂಡ ದುಃಖದಲ್ಲಿ ಮುಳುಗಿದ್ದಾರೆ. ಇನ್ನು, ಬಡೋವಾಲ್‌ನಲ್ಲಿ ಭಾಯಿ ಘಾನೈಯಾಜಿ ಚಾಟಿಬಲ್ ಆಸ್ಪತ್ರೆ ಮತ್ತು ಸಾರ್ವಜನಿಕ ಸೇವಾ ಸೊಸೈಟಿಯಿಂದ ಈ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಇದನ್ನೂ ಓದಿ: ಹೈದರಾಬಾದ್: ಮಗಳೆದುರೇ ಗುಂಡು ಹಾರಿಸಿಕೊಂಡು ಸಚಿವೆಯ ಗನ್‌ಮ್ಯಾನ್ ಆತ್ಮಹತ್ಯೆ